ಪ್ರಿಯ ಮಿತ್ರರೇ....
ಸದಾ ಇಂಗ್ಲೀಷಿನಲ್ಲಿ ಹರಟಲು ಯತ್ನಿಸುತ್ತ ಕನ್ನಡವ ಮರೆಯಲೆತ್ನಿಸುತ್ತಿರುವ ಕರುನಾಡ ಪುತ್ರ/ಪುತ್ರಿಯರೇ....
ಅಲ್ಲಿ ಮಹಾನಗರದೊಳಗೆ ಎಲ್ಲರೂ ಕ್ಷೇಮವೇ, ಸೌಖ್ಯವೇ?
ವಾರಾಂತ್ಯದ ಸ್ವಚ್ಛಂದ ಸ್ವಾತಂತ್ರ್ಯ ಸುಖದೊಳಗೆ ವಿಲಾಸ ಜೀವನಕ್ಕೆ ಕೊರತೆಯೇ?
ಪ್ರಿಯ ಮಿತ್ರರೇ....
ನನಗಿಲ್ಲ ನಿಮ್ಮಲ್ಲಿ ಅಸೂಯೆ, ನನಗಿಂತ ಹೆಚ್ಚು ಸಂಪಾದಿಸುವಿರೆಂದು ಎಂದಿಗೂ;
'ಸಂತೋಷದಿಂದಿರಲಿ ನಿಮ್ಮ ಮನಸು' ಎಂದು ಹಾರೈಸುವೆ, ನೀವೆನ್ನ ಆಪ್ತ ಬಂಧುಗಳು ಇಂದಿಗೂ.
ದಿನಾ "ಬೆಳ್ಳಿ ಮೂಡುವ ವೇಳೆಗೆ ಬಸ್ಸಿಗೆ ಜೋತು ಬಿದ್ದು, ಬೆಳದಿಂಗಳು ಬರುವ ವೇಳೆಗೆ ಮನೆಗೆ ಬಂದು" ಆರೋಗ್ಯ ಹಾಳಾದೀತು!! ಸ್ವಲ್ಪ ಜೋಪಾನ;
ಸಣ್ಣ ವಿಷಯಗಳಿಗಾಗಿ ಮನಸು ಬಿಸಿ ಮಾಡದಿರಿ, ಒತ್ತಡವೇರಿಸಿಕೊಳ್ಳದಿರಿ; ಕೊಂಚ ದೂರವಿರಲಿ-ಮದ್ಯ, ಧೂಮಪಾನ.
ಪ್ರಿಯ ಮಿತ್ರರೇ....
ವೇದವಾಕ್ಕುಗಳಂತೆ ನಮಗರ್ಥವಾಗದ programಗಳನು ಬರೆದರೂ- ಮಂತ್ರಾನುಷ್ಠಾನಗೈದ ಋಷಿಗಳಂತಾಗಿರಿ; ಆ ಮಂತ್ರದ ಆಳವನು ತಿಳಿದು.
ನಿಮ್ಮಂಥ ಅಮಾಯಕರನ್ನು ಯಾಮಾರಿಸುವ ನಯವಂಚಕರಲ್ಲಿ ತುಂಬಾ ಜನರಿದ್ದಾರೆ; ಎಚ್ಚರಿಕೆಯಿಂದಿರಿ!! ನಿಮ್ಮ ಸುತ್ತಲೂ ಸಂಯಮದ ಲಕ್ಷ್ಮಣರೇಖೆ ಎಳೆದು.
ದುಡ್ಡು ಕೊಟ್ಟು ಅತಿಥಿಗಳಾಗುವ (paying guest) ದೌರ್ಭಾಗ್ಯ (ಹೊಸ ಸಂಪ್ರದಾಯ!!) ಮಾಯಾನಗರಿಯಲ್ಲಿದೆಯಂತೆ, ಹೌದೇ?
Fast Foodಗಳಿಗೆ ಶರಣಾಗಿ ಆಕಾರ ವಿಕಾರ ಮಾಡಿಕೊಳ್ಳದಿರಿ,ಒಂದ್ವೇಳೆ ಬೊಜ್ಜು ಬಂದರೂ ಕರಗಿಸುವ,ಜೊತೆಗೆ ದುಡ್ಡನ್ನೂ ಕರಗಿಸುವ ಆರೋಗ್ಯ ಸಂಸ್ಥೆಗಳಿಗೆ ಅಲ್ಲಿ ಬರವೇ?
ಪ್ರಿಯ ಮಿತ್ರರೇ....
ದುಡ್ಡು ಮಾಡುವ ಛಾತಿಯೊಳಗೆ ಬದುಕಿನ ಸುಂದರ ಕ್ಷಣಗಳನ್ನು ಕಳೆದುಕೊಳ್ಳದಿರಿ; ದ್ರವ್ಯ ಸಂಗ್ರಹ ಮಾತ್ರವಲ್ಲ ಜೀವನದ ಪರಾಕಾಷ್ಠೆ.
ಹೆಚ್ಚಿನ ದುಡ್ಡಿಗಾಗಿ ಬೇರೆ Companyಗಳಿಗೆ ಹಾರಿ ಹಾರಿ ಹಣದ ಬಾವಿಯೊಳಗಿನ ಕಪ್ಪೆಯಂತಾಗದಿರಿ; ಎಲ್ಲಿ ಹೋದರೂ ನಿಮ್ಮಲ್ಲಿರಲಿ ಕರ್ಮನಿಷ್ಠೆ.
ಬಾಯಲ್ಲೆರಡು ಕನ್ನಡ ನುಡಿಯಿರಲಿ,ಮುಖದ ತುಂಬ ಹೂ ನಗುವಿರಲಿ; ಮನದೊಳಗಿರಲಿ ಅದೇ ಹಳೆಯ,ಮುಗ್ಧ ಪ್ರೀತಿ ತುಂಬಿದ ಕನಸು.
ಮರೆಯದಿರಿ ಈ ಬಡಪಾಯಿಯನು,ನಾಲ್ಕುದಿನ ನೆಮ್ಮದಿಗಾಗಿ ಬಂದು ಸ್ವೀಕರಿಸಿ ಆತಿಥ್ಯವನು; ಒಂದಾಗಿ ಸೃಷ್ಟಿಸೋಣ ಮನೆ-ಮನ ತುಂಬ ಹೊಸ ಹಗಲುಗನಸು.
ಪ್ರಿಯ ಮಿತ್ರರೇ.............
ಪ್ರಸ್ತುತ ಕವನವು ನನ್ನ ಬಹುತೇಕ ಸ್ನೇಹಿತರು ಹಿಡಿದಿರುವ ವೃತ್ತಿಯ ವೃತ್ತಿಪರ ಜಾಡನ್ನು ಹಿಡಿದು ಬರೆದದ್ದು. ಇದರಲ್ಲಿ ನನ್ನದಾಗಿ ಇರುವುದು ಅವರಿಗೆ ಹೇಳಿರುವ ಕಿವಿಮಾತುಗಳು, ಹಾರೈಕೆಗಳು ಅಷ್ಟೆ. ಉಳಿದವೆಲ್ಲ ಅವರು ಹೇಳಿರುವ ಮಾತುಗಳೇ, ಅವರ ಅನುಭವದ ಕತೆಗಳೇ ಆಗಿವೆ.
ಇದನ್ನು ಬರೆದದ್ದು 2007 dec ನಲ್ಲಿ. ಆಗ ಐಟಿ ಕ್ಷೇತ್ರದಲ್ಲಿ ಏರುಗತಿಯ ಓಟವಿತ್ತು. ಇತ್ತು ಅಂದ್ರೆ ಈಗ ಇಲ್ಲ ಅಂತ ಅಲ್ಲ. ಆದರೆ ಅಂತಹ ಸ್ಥಾನದಿಂದ ಕೆಳಗೆ ಬಂದಿದೆ. ಆದರೂ ನಮ್ಮ ಸ್ನೇಹಿತರ ಪರಿಸ್ಥಿತಿ ಏನೂ ಬದಲಾಗಿಲ್ಲ. ಇನ್ನೂ ದುಸ್ತರವಾಗಿದೆ ಅಷ್ಟೆ. ಎಂಟು ಗಂಟೆವರೆಗೆ ಇರುತ್ತಿದ್ದವರು ೧೦ ಗಂಟೆವರೆಗೆ ಇರುವಂತೆ ಆಗಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ