ಮುಂಜಾವಿನರುಣದಲಿ, ಸಂಜೆ ರವಿಕಿರಣದಲಿ, ಸೃಷ್ಟಿ ಸೌಂದರ್ಯವೇ ತಾನಾಗಿ ಹೊಳೆಯುವಳೆನ್ನ ಹುಡುಗಿ.
ಹಕ್ಕಿ ಕೊರಳೊಳು ಕುಳಿತು,ನನ್ನ ಹೆಸರನು ಕರೆದು ಕವಿಕೃತಿಯ ಪ್ರಕೃತಿಯೆ ತಾನಾಗಿ ಬೆಳೆದಿರುವಳೆನ್ನ ಬೆಡಗಿ.
ಜಿಟಿ ಜಿಟಿ ಸುರಿಯುವ ಮಳೆಯಲ್ಲಿ, ಕೈಯ್ಯ ಕೊಡೆ ಕಿತ್ತೆಸೆದು, ನನ್ನೆದೆಯ ಕಾರ್ಮೋಡ ಕರಗಿಸಿ, ಎದೆಗೆ ಪ್ರೀತಿ ಸೋನೆ ಸುರಿಸಿದವಳು.
ಬೆಳಗಿದಿಬ್ಬನಿಯ ನಡುವೆ ತೂರಿದೆಳೆ ಬಿಸಿಲಿಗೆ ಮೈಕಾಯಿಸಿದಂತೆ ನನ್ನ ಹೃದಯವನು ಕಾಯಿಸಿ ಬೆಚ್ಚಗೆ ಬಚ್ಚಿಟ್ಟಿಹೆನಾಕೆಯನು; ಅವಳೊಂದು ಅಮೂಲ್ಯ ಹರಳು.
ಎಲ್ಲ ನಾದ, ಎಲ್ಲ ವೇದ, ಸರಸ-ಸಲ್ಲಾಪದ ಅಮೋದ-ಪ್ರಮೋದ,ಎಲ್ಲಿ ಮನ ಹರಡಿದರೂ ಅವಳದೇ ನಿನಾದ.
ಕೇಳುತ್ತ ಕೇಳುತ್ತ ಆ ಮಧುರ ಕಲರವ ನಿನಾದ, ಕರಗಿ ಹೋಗಿದೆ ಮನವು-ಸವಿಯುತ್ತ ಅವಳ ಸಿಹಿನುಡಿಗಳ ಸ್ವಾದ.
ಯತ್ನವಿಲ್ಲದೆ ಮೂಡಿದೆಯವಳ ಮೊಗದಲಿ ನನ್ನೆಡೆಗೆ ಮುಗುಳ್ನಗೆ-ಸುರಿಸಿ ಅನಂತ ಮುತ್ತುರತ್ನಗಳ. ಸಾಗರ ಮೀರಿಸುವಂತೆ-ನಗೆಯ ಜೊತೆಗೆ.
ಈ ಪುಟ್ಟ ಎದೆಯಲಿ ಎಷ್ಟು ತಾನೆ ತುಂಬಿಸಿಕೊಳ್ಳಲಿ ಅದನು ನಾನು? ಅದಕಾಗಿಯೇ ಜಾಣ್ಮೆಯಲಿ ಅವಳ ಪುಟ್ಟ ಹೃದಯವನೇ ಕದಿಯುತಿರುವೆ ಜೊತೆ ಜೊತೆಗೆ!!
ನನಗೆ ತಿಳಿಯದಂತೆಯೇ ನಾ ಲಯವಾಗುತಿರುವೆ,ಸೃಷ್ಟಿಸಲು ಹೋಗಿ ನಿನ್ನ ಮುಗ್ಧ ಪ್ರೇಮ ಕುರಿತ ಕವಿತೆಯನು.
ಸಿಹಿಸಾಗರದೊಳಗೆ ಕಲ್ಲು ಸಕ್ಕರೆಯಂತಾಗಿ,ಕರ ಕರಗಿ ನಿನ್ನ ಹೃದಯದೊಳು ಮೂಡಲೆತ್ನಿಸುತಿರುವೆ ನಾನು.
ಬಾಂದಳದಲಿ ಕಂಡ ದೇವತೆಯೆ ನೀನು,ಕೊಟ್ಟು ಕರುಣಿಸು ದೇವಿ-ನಿನ್ನ ಪ್ರೀತಿಯಮೃತದ ಬಿಂದಿಗೆಯಲೊಂದು ಬಿಂದು.
ಉಕ್ಕಿ ಹರಿಯದೇ ಅದರಿಂದ ಹಿಗ್ಗಿ ಹಿರಿದಾಗಿ ಹುಚ್ಚೆದು,ಅದೃಶ್ಯ ಸರಸ್ವತಿಯಂತಿರುವ ಎನ್ನ ಸೌಭಾಗ್ಯ ಸಿಂಧು?
ಸಿಗದಿರಬಹುದು ನೀನು ಚಿಂತೆ ಕಿಂಚಿತ್ತಿಲ್ಲ;ಒಡಮೂಡಿರಲು ಅಡಿಯಲಡಗಿದ್ದ ಮನದ ಪ್ರೇಮ ದೀಪ.
ಕಿರುಸೆಲೆಯಲಿ ಚಿಮ್ಮಿ ಉಪನದಿಗಳಿಂದುಕ್ಕಿ ಜೀವನದಿಯಾದರೂ ಕೊನೆಗೆ ಮುಟ್ಟುವ ನದಿ ತೆರದಿ, ಈ ಪ್ರೀತಿ ಹರಿವಿಗೆ ನೀನೆ ಆದಿ ಅಂತ್ಯ ಸ್ವರೂಪ.
ಶೃತಿ ಸೇರಿಸಿ ಹಾಡುತಿರು ಜೊತೆಗಿದ್ದು ನನ್ನ ಮಾನಸವೀಣೆಯ ಮಿಡಿತಕೆ ಹರಿಸಿ ಪ್ರೇಮ ರಾಗ;
ಯಜ್ಞದೇವತೆ ನೀನೆ, ಯಾಗಫಲವೂ ನೀನೆ, ಎನ್ನ ಯಜಮಾನ್ಯದಿಂದಿರಲು ಪ್ರೇಮ ಯಾಗ.
ಎಲ್ಲರಿಗೂ ನಮಸ್ಕಾರ. ನಾನು ಹೀಗೆಯೇ ತರಗತಿಯೊಳಗೆ ಟೈಂಪಾಸ್ ಮಾಡೋದಕ್ಕೆ ಕವನ ಬರೆಯಲು ಶುರು ಮಾಡಿದೆ. ಆದರೆ ಅದು ತರಗತಿ ಮುಗಿದ ಮೇಲೂ ಮುಂದುವರಿದು ಬಿಡ್ತು. ಒಳ ಹೊರಗೆ ಬರೆದ, ಬರೆಯುತ್ತಿರುವ ಎಲ್ಲ ಬರಹಗಳನ್ನು ಈ ಮೂಲಕ ನಿಮ್ಮ ಮುಂದೆ ಇಡಲಿಚ್ಛಿಸುತ್ತಿದ್ದೇನೆ. ನನಗೆ ಅಷ್ಟೊಂದು ಶೃತಿ ಬದ್ಧವಾಗಿ ಅಲಂಕಾರಿಕವಾಗಿ ಸಂಕೀರ್ಣಶೈಲಿಯಲ್ಲಿ ಬರೆಯಲು ಬರುವುದಿಲ್ಲ. ನಡೆಯುವ ಮಗುವಿನ ಎಡವನ್ನು ಮನ್ನಿಸಿ,ಕೈ ಹಿಡಿದು ನಡೆಸುವಿರೆಂದು ತಿಳಿದಿರುವೆನು. ಓದಿ ಸಂತೋಷಿಸುವಿರೆಂದು ನನ್ನ ಭಾವನೆ. ನಿಮ್ಮ ಅಭಿಪ್ರಾಯವನ್ನು ಅಗತ್ಯವಾಗಿ ತಿಳಿಸಿ.
ಭಾನುವಾರ, ಮಾರ್ಚ್ 8, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬೆಂಬಲಿಗರು
ಬ್ಲಾಗ್ ಆರ್ಕೈವ್
ನನ್ನ ಬಗ್ಗೆ
- chaitanya chintana
- electrical engineer working in Mangalore chemicals and fertilisers. Mangalore
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ