ಗುರುವಾರ, ಮಾರ್ಚ್ 19, 2009

ಕೊಳ್ಳುಬಾಕರು.

ಬಂದಿದೆ ಯುಗಾದಿ,ದೀಪಾವಳಿಗಾಗಿ ನಿಮ್ಮ ಮನೆ ಬಾಗಿಲಿಗೆ ಹೊಸ ಧಮಾಕಾ!!
WASHING MACHINEಗೆ IRON BOX FREE, ಮೊಬೈಲ್ ಜೊತೆ SIM CARD FREE,
ಇನ್ನೆರಡೇ ಗೇಣಿಗೆ ಸಿಗಲಿದೆ ನಾಕ!!
ಭಾರಿ ಮೊತ್ತದ ಐಟಂಗಳಿಗೀಗ ಕೇವಲ ೧೫ ದಿನ ದರ ಕಡಿತ ಮಾರಾಟ.
ಗಂಡ ದಿವಾಳಿ ಎದ್ದರೂ ಸರಿ,ಈ ಸಾರ್ತಿ ಅಂಗಡಿಯನ್ನೇ ಕೊಂಡುಕೊಳ್ಳಬೇಕೆಂದು ಹೆಂಡತಿಯ ಹಾರಾಟ.

ಅಲ್ಲೆಲ್ಲೋ ಮೂಲೆಯಲ್ಲಿ ಸೈಟೊಂದಿದೆ; ಮುಂದೆ ಮತ್ತೆ ದುಡ್ಡು ಹೆಚ್ಚಾದ್ರೆ ಕಷ್ಟ,
ಅದಕಾಗಿ ಈಗಲೇ ತೆಗೆದ ಬ್ಯಾಂಕಿಂದ ಲೋನು;
ಮಹಾನಗರದ ಮೂಲೆಯೊಳಗೆ ಮನೆ ಕಟ್ಟಿಕೊಂಡವನೇ ಮಹಾನ್ ಎಂದೆಣಿಸಿ ಮನೆ ಕಟ್ಟುವ ದುಡ್ಡಿಗಾಗಿ ಮಾರಿದ ಊರಿನ ಫಲವತ್ತಾದ ಜಮೀನು.
ಈಗ ಮತ್ತೆ ಕಾರಿನ ಮೇಲೆ ಸಾಲಕ್ಕೆ ಕಡಿಮೆಯಾಗಿದೆಯಂತೆ ಬ್ಯಾಂಕಲ್ಲಿ ಶೇಕಡಾವಾರು.
ಕಾರಿಗೂ ಈಗ ಯಾವುದೋ OFFER ಇದೆಯಂತೆ, ಕೊಂಡುಕೊಳ್ಳೋಣ ಬೇಗ;
ತೋರಿಸಬೇಡವೇ ಊರ ಜನಕ್ಕೆಲ್ಲ ನಮ್ಮ ಕಾರುಬಾರು.

ಮನೆಯಾಯ್ತು, ನೆಲೆಯಾಯ್ತು, ಓಡಾಡಲಿಕ್ಕೊಂದು ಕಾರು, ಸ್ಕೂಟರು.
ಆದ್ರೆ ಯಾವುದೂ ಸ್ವಂತದ್ದಲ್ಲ!!; ಎಲ್ಲದಕ್ಕೂ MONTHLY INSTALLMENTಗಳೇ ಬೇರು.
ಹೊಸ ಮಾಲ್ ಗಳಲಿ, DEPARTMENTAL STOREಗಳಲ್ಲಿ ಆಕರ್ಷಕ ವಸ್ತುಗಳಿಗೇನು ಕೊರತೆಯೇ?
ಹೊಸ ಮನೆಗೆ ಕಾಲಿಟ್ಟ ಹೆಂಡತಿಯೊಡನೆ ಅಲ್ಲಿಗೆ ಹೋದರೆ ಗಂಡನಿಗೆ ಸ್ವಲ್ಪ ಹೆಚ್ಚು ತೊಂದರೆಯೇ.

ಸಂಬಳ ಸಾಲುತ್ತಿಲ್ಲ; ಏಕೋ,ಏನೋ?- ಹೊಗಲೇಬೇಕಾಗಿದೆ ಹೆಂಡತಿ ದುಡಿಮೆಗೆ.
ದುಡಿದು ಸಾಕಾಗಿ ಯಾಂತ್ರಿಕವಾಗಿದೆ ಜೀವನ;ಈ ಐಷಾರಾಮಿ ವಸ್ತುಗಳೆಲ್ಲ ಯಾರ ಜಮೆಗೆ?
ಆಧುನೀಕತೆಯ ಅಮಲಿನಲಿ, ಮಹತ್ಸಾಧನೆಗೈಯ್ಯುವ ಗುಂಗಿನಲಿ, ಬಿದ್ದಂತಾಗಿ ತಳವಿಲ್ಲದ ಗುಂಡಿಗೆ;
ನೊಗ ಹೊರಲಾರದೆ ಜೋಡಿ, ಜರ್ಜರಿತವಾಗಿದೆ ದೇಹ ನಿಟ್ಟುಸಿರನು ತೀಡಿ,ದುರ್ಬಲವಾಗಿದೆ ಈಗ ಪ್ರೀತಿ ಪ್ರೇಮದ ಗುಂಡಿಗೆ.

ಸನ್ಮಿತ್ರರಿಗೆ ಸಪ್ರೇಮ ವಂದನೆಗಳು. ಕೊಳ್ಳುಬಾಕ ಸಂಸ್ಕೃತಿ(CONSUMERISM) ನಮ್ಮಲ್ಲಿ ಘನಘೋರವಾಗಿ ಬಿಟ್ಟಿದೆ. ಸಿಕ್ಕಿ ಸಿಕ್ಕದ್ದೆಲ್ಲ ತಂದು ರಾಶಿ ಹಾಕಿ ಆಮೇಲೆ ಒಂದು ಗಳಿಗೆ ನಿಂತು ಇದು ಬೇಕೋ ಬೇಡವೋ ಎಂದು ಯೋಚನೆ ಮಾಡುತ್ತೇವೆ. ಲೆಕ್ಕಕ್ಕೆ ಸಿಗದಷ್ಟು ಆಯ್ಕೆಗಳು, ದಿನೇ ದಿನೇ ಬದಲಾಗುತ್ತಿರುವ ಮೌಲ್ಯಗಳು, ಗ್ರಾಹಕ ಕ್ಷೇತ್ರದಲ್ಲಾಗುತ್ತಿರುವ ಸ್ಪರ್ಧಾತ್ಮಕ ಬದಲಾವಣೆಗಳು ಎಲ್ಲವೂ ನಮ್ಮನ್ನು ಎಲ್ಲವನ್ನೂ ಕೊಂಡುಕೊಳ್ಳುವಷ್ಟು ಮಟ್ಟಿಗೆ ಮುಟ್ಟಿಸಿ ಕೈಬಿಟ್ಟಿವೆ. ನಾವೂ ಅತಂತ್ರ ಮನಸ್ಕರಾಗಿ ಯಾವುದನ್ನು ಕೊಂಡುಕೊಳ್ಳಬೇಕು, ಕೊಂಡುಕೊಳ್ಳಬಾರದು ಎನ್ನುವ ವಿವೇಚನೆ, ವ್ಯವಧಾನ ಎರಡನ್ನೂ ಕಳೆದುಕೊಂಡಿದ್ದೇವೆ. ಮೇಲಂತಸ್ತಿನ ಜನರಿಗೆ ನಿಮ್ಮ ನೆಚ್ಚಿನ ಹವ್ಯಾಸಗಳೇನು? ಅಂತ ಕೇಳಿದ್ರೆ SHOPPING!! ಅಂತ ಹೇಳುವಷ್ಟರ ಮಟ್ಟಿಗೆ ಬೆಳೆದಿದೆ ಈ ಕೊಳ್ಳುಬಾಕತನ. ಈ ಮಹಾನ್ ಪೆಡಂಭೂತದ ಕುರಿತು ವಿವರಿಸುವ ಎರಡು ನುಡಿ ಮೇಲಿನ ಕವನದಲ್ಲಿದೆ. ಕಣ್ಣಿಗೆ ಕಂಡದ್ದೆಲ್ಲ ಕೊಂಡುಕೊಳ್ಳಬೇಕೆನ್ನುವ ಹಪಾಹಪಿತನವನ್ನು ಸ್ವಲ್ಪ ಕಡಿಮೆಮಾಡಿಕೊಳ್ಳಿ ಎಂದು ನಾನು ನಿಮಗೆ ಇದರ ಮೂಲಕ ಸೂಚನೆ ನೀಡುತ್ತಿದ್ದೇನೆಂದು ಬೇರೆ ಹೇಳಬೇಕಾಗಿಲ್ಲ ತಾನೆ? ಆರ್ಥಿಕ ಹಿಂಜರಿತಕ್ಕೆ ಮೊದಲು ಬರೆದ ಕವನವಾದರೂ ಹಿಂಜರಿತದ ಸಮಯಕ್ಕೆ ಬಹಳವಾಗಿ ಒಪ್ಪುತ್ತದೆ ಅನ್ನೋದು ನನ್ನ ಅನಿಸಿಕೆ...

ಕಾಮೆಂಟ್‌ಗಳಿಲ್ಲ:

ಬೆಂಬಲಿಗರು

ನನ್ನ ಬಗ್ಗೆ

electrical engineer working in Mangalore chemicals and fertilisers. Mangalore