ಎಲ್ಲರಿಗೂ ನಮಸ್ಕಾರ. ನಾನು ಹೀಗೆಯೇ ತರಗತಿಯೊಳಗೆ ಟೈಂಪಾಸ್ ಮಾಡೋದಕ್ಕೆ ಕವನ ಬರೆಯಲು ಶುರು ಮಾಡಿದೆ. ಆದರೆ ಅದು ತರಗತಿ ಮುಗಿದ ಮೇಲೂ ಮುಂದುವರಿದು ಬಿಡ್ತು. ಒಳ ಹೊರಗೆ ಬರೆದ, ಬರೆಯುತ್ತಿರುವ ಎಲ್ಲ ಬರಹಗಳನ್ನು ಈ ಮೂಲಕ ನಿಮ್ಮ ಮುಂದೆ ಇಡಲಿಚ್ಛಿಸುತ್ತಿದ್ದೇನೆ. ನನಗೆ ಅಷ್ಟೊಂದು ಶೃತಿ ಬದ್ಧವಾಗಿ ಅಲಂಕಾರಿಕವಾಗಿ ಸಂಕೀರ್ಣಶೈಲಿಯಲ್ಲಿ ಬರೆಯಲು ಬರುವುದಿಲ್ಲ. ನಡೆಯುವ ಮಗುವಿನ ಎಡವನ್ನು ಮನ್ನಿಸಿ,ಕೈ ಹಿಡಿದು ನಡೆಸುವಿರೆಂದು ತಿಳಿದಿರುವೆನು. ಓದಿ ಸಂತೋಷಿಸುವಿರೆಂದು ನನ್ನ ಭಾವನೆ. ನಿಮ್ಮ ಅಭಿಪ್ರಾಯವನ್ನು ಅಗತ್ಯವಾಗಿ ತಿಳಿಸಿ.
ಶನಿವಾರ, ಮಾರ್ಚ್ 21, 2009
ಹರೆಯ
ಹುಟ್ಟಿನೊಡನೆಯೇ ಸಾವೂ ಹುಟ್ಟಿ ,ಹುಟ್ಟನ್ನು ಕಳೆಯುತ್ತದೆನ್ನುವ ಸತ್ಯಕ್ಕೀಗ ಸುಳ್ಳೇ ಜ್ವರ.
ಮಾಯೆ ಅನಂತ ವಿರಹದ ಬಲೆ ಬೀಸಿದೆ; ಬಯಸಿದೆ ಸಂಗಾತಿಯ ಸಂಗಡ ಸಂಭ್ರಮದ ಸಂಚಾರ.
ಸಂಗಾತಿಯ ಸಂಗತಿಗಳಿಲ್ಲದೇ ಸಂಘಾತಕ್ಕೊಳಗಾಗಿದೆ ಕರಣ, ತೂರಾಡಿದೆ ತೂಗುದೀಪ; ಮನವೀಗ ಮರ್ಕಟ ಲಾಂದ್ರ.
ದಿಕ್ಕುಗಾಣದೆ ನೂರು ದಿಕ್ಕಿನೆಡೆ ನೋಟ.
ತಪ್ಪಿಸಿಕೊಳ್ಳಲು ಕವಲುದಾರಿಗಳೊಳಗೆ ಗಾಣದೆತ್ತಿನ ಓಟ.
ಮಾರ್ಗಮಧ್ಯದೊಳಗೆ ಸುಸ್ತಾಗಿ ಒಳದಾರಿಗೆ ಹುಡುಕಾಟ.
ಅಡ್ಡದಾರಿಯ ಕೈಸನ್ನೆ, ಸಮ್ಮೋಹಿನಿಯ ಸೆಳೆತ; ಹೊರಳು ಹಾದಿಯಲಿ ದೊರೆತ ಸಮಯ ಸಾಧಕರ ಕೂಟ.
ಮುಳುಗೇಳುತ ನದಿನಡುವೆ ದೋಣಿದ್ವಯಗಳ ಆಶ್ರಯಿಸುತ,
ಹಪಹಪಿಸಿ ಪರಿತಪಿಸಿ ಸುಳಿಯ ಕಡೆಗೋಡುತ.
ಭೂತದನುಭವವಿಲ್ಲ, ಭವಿಷ್ಯಕೆ ಭಾಷ್ಯ ಬರೆದಿಲ್ಲ.
ಭವದಿ ಬೆಂದಿದೆ ಜೀವ: ಇಂದೆನ್ನುವುದು ಈಗ ಸಿಗುತ್ತಲೇ ಇಲ್ಲ.
ಪ್ರಾಯವೆನ್ನುವುದು ಪ್ರಾಯಃ ಪ್ರತಿಜೀವಿಯ ಅನಿವಾರ್ಯ ಅವ್ಯವಸ್ಥಿತ ಪಯಣ.
ಪ್ರತಿನದಿಯ ದೆಸೆಗಿರುವ ನೆರೆಯ ಅನುಭವದಂತೆ. ಜೀವನದ ಜೀವೋನ್ಮಾದ ನರ್ತನ.
ಎದುರಿಸಬಲ್ಲದೇ ಮನಸು ಸ್ಥಿತಿಯ ಪ್ರಳಯಗಳ, ಅನುಭವದ ಅಣೆಕಟ್ಟಿನಚ್ಚುಕಟ್ಟಿರದೆ?
ತಿಳಿನೀರಿಗೆ ಬೆಲೆಯಿಲ್ಲ, ಒಂದು ಬಾರಿಯಾದರೂ ಅದು ಕಲ್ಮಣ್ಣು ರಾಡಿಗಳ ಕಾಣದೆ.
ಉಕ್ಕಿನಂತಿಹ ಸೊಕ್ಕು, ಬುದ್ಧಿಗೆ ಹಿಡಿದಿಹ ತುಕ್ಕು, ರೊಕ್ಕದಿಕ್ಕಳ ಮೀರಿ ಬೆಳೆಯಬೇಕು ಹೃದಯ;
ನವ ಭಾವ ಸಂಸ್ಕಾರ, ನವ ಪ್ರಾಣ ಸಂಚಾರ, ಮನ್ಮಥನ ಶರ ಸೋಕಿ ಶಿವಶಕ್ತಿ ಸಂಚಯ.
ದೌರ್ಬಲ್ಯಗಳನೆಣಿಸಿ, ಅದನೆ ಮೆಟ್ಟಿಲಂದದಿ ಬಳಸಿ, ಮನಮಥಿಸಿ, ಮಾಯೆಯ ಮಣಿಸಿ.-
ಮುಂದೆ ಕಾದಿಹುದು ತಾರುಣ್ಯಕೆ ವಿಜಯ.
ಮಹತ್ ಸೋಲನು ಕೂಡ ಮಹಾನ್ ಗೆಲುವೆಂದೆಣಿಸಿ ಮುಂದೆ ನಡೆಯುವುದೇ ಹರೆಯ.
ಪ್ರಿಯ ಮಿತ್ರ ಮಂಡಲಕ್ಕೆ ನನ್ನ ನಮಸ್ಕಾರಗಳು. ಹಿಂದೆ "ಯೌವ್ವನ" ಎಂಬ ಒಂದು ಕವಿತೆಯನ್ನು ತರುಣ ಭಾವದಲ್ಲಿ ಭಾವಾವಿಷ್ಟನಾಗಿ ಬರೆದಿದ್ದೆ. ಆದರೂ ಆ ಜೀವನದ ಜೀವೋತ್ಸಾಹದ ಪ್ರಮುಖ ಭಾವವಾದ ಗೊಂದಲಮಯ ಜಗತ್ತನ್ನು ಆ ಕವನದಲ್ಲಿ ಸಾಕಷ್ಟು ವ್ಯಕ್ತಪಡಿಸಲಲು ಸಾಧ್ಯವಾಗದೇ ಹೋಯ್ತು. ಅದರಲ್ಲಿ ಒಂದು ರಭಸವಿತ್ತು, ವೇಗವಿತ್ತು. ಆದರೆ ರಭಸವೇ ಇಲ್ಲದ ಜಡತೆಯೇ ಜೀವನವಾದ ಸಂದರ್ಭಗಳೂ ಸಾಕಷ್ಟು ಇಲ್ಲದಿಲ್ಲ. ಅಸಹಾಯಕನ ಅಳಲು ಆರ್ತತೆ, ದಿಕ್ಕೇ ತೋಚದಂತಾಗಿ ಬುದ್ಧಿ ಭ್ರಮೆ ಹಿಡಿಯುವ ಪರಿಸ್ಥಿತಿ, ಎಲ್ಲವೂ ಹರೆಯದ ಅವಿಭಾಜ್ಯ ಅಂಗವೇ ಆಗಿದೆ. ಹಾಗಂತ ಕವನದಲ್ಲಿ ಬರೀ ಗೋಜಲುಗಳನ್ನೇ ಕೊಟ್ಟಿರುವೆನೆಂದು ತಿಳಿಯಬೇಕಾಗಿಲ್ಲ. ಅಡ್ಡಡ್ಡಾಗಿ ಹೆಣೆದ ಬಲೆಯನ್ನೂ ಜೊತೆಗೆ ಅದನ್ನು ಬಿಚ್ಚುವ ಹಲವು ದಾರಗಳನ್ನೂ ಮನೋ ಅನುಭವದಂತೆ ಚಿತ್ರಿಸಿದ್ದೇನೆ. ದಾರಗಳು ಸೂತ್ರ ಹರಿಯುವಂತಿವೆಯೇ ಅಥವಾ ಸೂತ್ರಗಳೇ ಅರ್ಥವಾಗದಂತಾಗಿವೆಯೇ ನೀವೇ ಪ್ರತಿಕ್ರಯಿಸಬೇಕು. ಪದ್ಯದಲ್ಲಿ ಬಂದಿರುವ 'ಪಂಚಮ' ಎಂಬ ಪದವನ್ನು ಪಂಚೇಂದ್ರಿಯಗಳು ಅಂತ ಗ್ರಹಿಸಬೇಕು. ಅಥವಾ ಸ್ವರದ ಪಂಚಮ 'ಪ' ಅಂತ ಗ್ರಹಿಸಿದರೂ ಪರವಾಗಿಲ್ಲ. ಆರೋಹಣದಲ್ಲಿ ಪಂಚಮಿ ಸ್ವರ ವಿಕೃತಿಯಾಗಿದೆ ಅಂತ ಗ್ರಹಿಸಬಹುದು.
ಶುಕ್ರವಾರ, ಮಾರ್ಚ್ 20, 2009
ಆವತ್ತು
ನೀ ನನ್ನ ಮನದೊಳಂದು ಹರಿಣದೋಟದಿ ಓಡಿ ನನ್ನಚಲಚಿತ್ತ ಚಲಿಸಿದ್ದು ಸುಳ್ಳಲ್ಲವು.
ಗೋ ಮಂದೆಯೊಳಗೊಂದು ಮುದ್ದು ಕರು ಕಂಡಂತಾಗಿ ನಿನ್ನ ಮೇಲುಕ್ಕಿದ ಪ್ರೇಮಕೆ ಕೊನೆಯಿಲ್ಲವು.
ಬರೀ ಸೌಂದರ್ಯದ ರಾಶಿಯಲ್ಲ ನೀನು; ಸುಗುಣ ಸನ್ನಡತೆಗಳ ಕಾಶಿ.
ಈ ಎದೆಗೂಡಿನೊಳಗೆ ಚೆಲ್ಲುತಿರುವ ಕಾಂತಿಯು ನೀನೆ; ಇದಕೆನ್ನ ಮನವೆ ಸರ್ವಸಾಕ್ಷಿ.
ಪ್ರೀತಿಯೂಟ:
ಮೊದಲಸಲ ನಿನ್ನ ಮನೆಗೆ ಬಂದಾಗಿನ ಅತಿಥಿ ಸತ್ಕಾರವನು ನಾನು ಮರೆಯುವೆನೇನು?
ಕಣ್ಣೋಟವು ಕರದಂಟು,ಕೇಸರಿಬಾತಿಗಿಂತ ಸಿಹಿಯಾಯ್ತು, ನಿನ್ನುಪಚಾರದ ಮಾತದು ಸವಿಜೇನು.
ಬೆಳಕೋಡಿದಂತಾಯ್ತು ನಡೆಯುತ್ತಿರಲು ನೀನು, ಲಜ್ಜೆಯಲಿ ಕೆಂಪುಗಲ್ಲವ ಹೊತ್ತು ಆಚೆಯಿಂದೀಚೆ;
ಅಳಿಸಲಾಗದಂತೆ ಕಂಗೊಳಿಸಿತು ನಾನು ಹೃದಯದಲಿ ಹಾಕಿದ್ದ-ನಿನ್ನ ಸುಮನೋಹರ ಮೊಗದ ಹಚ್ಚೆ.
ಪ್ರೇಮ ಪಾಠ:
ನಾ ನಿನ್ನ ಜೊತೆ ತಿಂದ ಐಸ್‌ಕ್ರೀಂಗಳಿಗಿಂತ ತಂಪು ನಿನ್ನ ಕಣ್ಣುಗಳ ದೃಷ್ಟಿ;
ನಮ್ಮ ಪ್ರೇಮ ಸಂಕಲ್ಪದಂತೆ ಬಿಗಿಯಾಗಿ,ಹಿತವಾಗಿ ಬೆಚ್ಚಗಿಹುದು ನನ್ನ ಕೈಯ್ಯೊಳು ಬೆರೆತ ನಿನ್ನ ಕೈಮುಷ್ಠಿ.
ನಿನ್ನ ನಗುವಿನಲೆಗಳೊಳಗೆ ಮುಳುಗಿ,ದಂತಕಾತಿಯಲಿ ಬೆಳಗಿ ತೊಳಗುತಿದೆಯೆನ್ನ ಮನ, ಜಗವೆಲ್ಲ ನೀನೊಬ್ಬಳೇ ತುಂಬಿದಂತೆ;
ಕ್ಷಣ ಕ್ಷಣಗಳೂ ಭಾಗಭಾಗಗಳಾಗಿ ನಿನ್ನ ಬರುವಿಕೆಗೆ ಕಾಯುತಿವೆ ಚಿನ್ನ, ಸನ್ನದ್ಧವಾಗಿದೆ ಮೈಮನ-ನಗೆ ಹೂ ಸುರಿಸಿ ಆನಂದದ ಕಹಳೆ ಮೊಳಗುವಂತೆ.
ಕಚ್ಚೆ ಪಂಚೆ ಜರಿ ಪೇಟ:
ಥಳಥಳನೆ ಹೊಳೆವ ರೇಶಿಮೆ ಸೀರೆಯಂಚಿಗೆ ಬಂಗಾರದ ಕುಚ್ಚು; ಬಳುಕುವ ಸೊಂಟದ ಜೊತೆಯೇ ಬಳುಕಲು ವಡ್ಯಾಣದ ಸಂಚು!!
ಎಲ್ಲಿ ಯಾರನ್ನೋ ನೋಡುವ ನೆಪದೊಳಗೆ ಬಾಗಿಲ ಮರೆಯಿಂದ ನನ್ನ ಎದೆಯೆಡೆಗೇ ತೂರಿ ಬಂತು ಅವಳ ಕುಡಿನೋಟದ ಮಿಂಚು!!
ಅಭ್ಯಂಜನ,ಕಾಶಿಯಾತ್ರೆಗಳ ಮುಗಿಸಿ ಬಂದೆ ನಾನು ಬೇಗಬೇಗನೇ,ಅಂತರ್‌ಪಟದ ಮುಂದೆ ದಿನವೂ ಕ್ಷಣಗಳಾದವಂದು;
ಬೆಲ,ಜೀರಿಗೆಗಳ ನೆತ್ತಿಯ ಮೇಲೆ ಸುರಿದು ತಂಪಾಯಿತು ಮನಸು, ಕಟ್ಟಿದೆನು ಮೂರುಗಂಟು; ನೂರುeನ್ಮಗಳ ನಂಟಾಗಲೆಂದು.
ಸುಖ-ದುಃಖ ಸಮರಸದ ಬದುಕಿನಾಟ:
ಮಾತುಕೃತಿಗಳಲೆಲ್ಲ ಮನದ ಸ್ವಪ್ನದ ತುಂಬ, ತುಂಬಿ ತುಳುಕುತ ಚೆಲ್ಲಿ ಭಾಗ್ಯದುಷೆಯ;
ದಿಕ್ಕು ಕಾಣದೆ ನಿಂತು ದೆಸೆಯಿಲ್ಲದಾಗಿದ್ದೆ, ಭಾಗ್ಯಲಕ್ಷ್ಮಿಯಾಗಿ ತೋರಿದೆ ಬದುಕಲಿ ಹೊಸ ದಿಕ್ಕು ದೆಶೆಯ.
ಕೈ ಮಾತ್ರವಲ್ಲ, ಈ ಜೀವವನೆ ಹಿಡಿದಿರುವೆ ನೀ...... ಜೀವನದಿ ಜೀವನದಿಯಂತೆ ಹರಿದು
ವರ್ಷ ಪೂರ್ತಿ ಸುರಿಯಲಿ ನಿನ್ನ ಆನಂದ ವರ್ಷ; ಹರ್ಷದೋಕುಳಿಯಾಗು ಮಲ್ಲಿಗೆ ಹೂವಂತೆ ಬಿರಿದು.
ನಮಸ್ಕಾರ. ಎಲ್ಲ ಹುಡುಗರಿಗೂ ಸಾಮಾನ್ಯವಾಗಿ ಕ್ರಷ್ ಸಮಯದಲ್ಲಿ ಕಾಡುವ ಕನಸು ಅವು. ನನಗೂ ಕಾಡಿತ್ತು. ಕಾಡಿದ್ದನ್ನೇ ಕೂಡಿಹಾಕಿ ಕಲ್ಪನೆಯೊಂದಿಗೆ ಅದನ್ನು ನೂಕಿ, ಬಾಕಿ ತೀರಿಸಿದ್ದೇನೆ. ಬಾಕಿಯದ್ದು ನಿಮಗೆ ಬಿಟ್ಟದ್ದು.
ಏನೇ ಅಂದ್ರೂ ಆ ಕಲ್ಪನೆಯ ದಿನಗಳ ಮಜವೇ ಮಜ. ನಾವು ಶೂನ್ಯದೊಳಗೆ ಇರಬಹುದು. ಆದ್ರೆ ಆ ಶೂನ್ಯದಲ್ಲಿ ಎಲ್ಲವನ್ನ ತುಂಬಿಕೊಂಡು ಬದುಕುವ ದಿನಗಳಿವೆಯಲ್ಲ... ಅವು ಅಮೂಲ್ಯ ಮತ್ತು ಅತುಲ್ಯ.
ಗುರುವಾರ, ಮಾರ್ಚ್ 19, 2009
ಕೊಳ್ಳುಬಾಕರು.
WASHING MACHINEಗೆ IRON BOX FREE, ಮೊಬೈಲ್ ಜೊತೆ SIM CARD FREE,
ಇನ್ನೆರಡೇ ಗೇಣಿಗೆ ಸಿಗಲಿದೆ ನಾಕ!!
ಭಾರಿ ಮೊತ್ತದ ಐಟಂಗಳಿಗೀಗ ಕೇವಲ ೧೫ ದಿನ ದರ ಕಡಿತ ಮಾರಾಟ.
ಗಂಡ ದಿವಾಳಿ ಎದ್ದರೂ ಸರಿ,ಈ ಸಾರ್ತಿ ಅಂಗಡಿಯನ್ನೇ ಕೊಂಡುಕೊಳ್ಳಬೇಕೆಂದು ಹೆಂಡತಿಯ ಹಾರಾಟ.
ಅಲ್ಲೆಲ್ಲೋ ಮೂಲೆಯಲ್ಲಿ ಸೈಟೊಂದಿದೆ; ಮುಂದೆ ಮತ್ತೆ ದುಡ್ಡು ಹೆಚ್ಚಾದ್ರೆ ಕಷ್ಟ,
ಅದಕಾಗಿ ಈಗಲೇ ತೆಗೆದ ಬ್ಯಾಂಕಿಂದ ಲೋನು;
ಮಹಾನಗರದ ಮೂಲೆಯೊಳಗೆ ಮನೆ ಕಟ್ಟಿಕೊಂಡವನೇ ಮಹಾನ್ ಎಂದೆಣಿಸಿ ಮನೆ ಕಟ್ಟುವ ದುಡ್ಡಿಗಾಗಿ ಮಾರಿದ ಊರಿನ ಫಲವತ್ತಾದ ಜಮೀನು.
ಈಗ ಮತ್ತೆ ಕಾರಿನ ಮೇಲೆ ಸಾಲಕ್ಕೆ ಕಡಿಮೆಯಾಗಿದೆಯಂತೆ ಬ್ಯಾಂಕಲ್ಲಿ ಶೇಕಡಾವಾರು.
ಕಾರಿಗೂ ಈಗ ಯಾವುದೋ OFFER ಇದೆಯಂತೆ, ಕೊಂಡುಕೊಳ್ಳೋಣ ಬೇಗ;
ತೋರಿಸಬೇಡವೇ ಊರ ಜನಕ್ಕೆಲ್ಲ ನಮ್ಮ ಕಾರುಬಾರು.
ಮನೆಯಾಯ್ತು, ನೆಲೆಯಾಯ್ತು, ಓಡಾಡಲಿಕ್ಕೊಂದು ಕಾರು, ಸ್ಕೂಟರು.
ಆದ್ರೆ ಯಾವುದೂ ಸ್ವಂತದ್ದಲ್ಲ!!; ಎಲ್ಲದಕ್ಕೂ MONTHLY INSTALLMENTಗಳೇ ಬೇರು.
ಹೊಸ ಮಾಲ್ ಗಳಲಿ, DEPARTMENTAL STOREಗಳಲ್ಲಿ ಆಕರ್ಷಕ ವಸ್ತುಗಳಿಗೇನು ಕೊರತೆಯೇ?
ಹೊಸ ಮನೆಗೆ ಕಾಲಿಟ್ಟ ಹೆಂಡತಿಯೊಡನೆ ಅಲ್ಲಿಗೆ ಹೋದರೆ ಗಂಡನಿಗೆ ಸ್ವಲ್ಪ ಹೆಚ್ಚು ತೊಂದರೆಯೇ.
ಸಂಬಳ ಸಾಲುತ್ತಿಲ್ಲ; ಏಕೋ,ಏನೋ?- ಹೊಗಲೇಬೇಕಾಗಿದೆ ಹೆಂಡತಿ ದುಡಿಮೆಗೆ.
ದುಡಿದು ಸಾಕಾಗಿ ಯಾಂತ್ರಿಕವಾಗಿದೆ ಜೀವನ;ಈ ಐಷಾರಾಮಿ ವಸ್ತುಗಳೆಲ್ಲ ಯಾರ ಜಮೆಗೆ?
ಆಧುನೀಕತೆಯ ಅಮಲಿನಲಿ, ಮಹತ್ಸಾಧನೆಗೈಯ್ಯುವ ಗುಂಗಿನಲಿ, ಬಿದ್ದಂತಾಗಿ ತಳವಿಲ್ಲದ ಗುಂಡಿಗೆ;
ನೊಗ ಹೊರಲಾರದೆ ಜೋಡಿ, ಜರ್ಜರಿತವಾಗಿದೆ ದೇಹ ನಿಟ್ಟುಸಿರನು ತೀಡಿ,ದುರ್ಬಲವಾಗಿದೆ ಈಗ ಪ್ರೀತಿ ಪ್ರೇಮದ ಗುಂಡಿಗೆ.
ಸನ್ಮಿತ್ರರಿಗೆ ಸಪ್ರೇಮ ವಂದನೆಗಳು. ಕೊಳ್ಳುಬಾಕ ಸಂಸ್ಕೃತಿ(CONSUMERISM) ನಮ್ಮಲ್ಲಿ ಘನಘೋರವಾಗಿ ಬಿಟ್ಟಿದೆ. ಸಿಕ್ಕಿ ಸಿಕ್ಕದ್ದೆಲ್ಲ ತಂದು ರಾಶಿ ಹಾಕಿ ಆಮೇಲೆ ಒಂದು ಗಳಿಗೆ ನಿಂತು ಇದು ಬೇಕೋ ಬೇಡವೋ ಎಂದು ಯೋಚನೆ ಮಾಡುತ್ತೇವೆ. ಲೆಕ್ಕಕ್ಕೆ ಸಿಗದಷ್ಟು ಆಯ್ಕೆಗಳು, ದಿನೇ ದಿನೇ ಬದಲಾಗುತ್ತಿರುವ ಮೌಲ್ಯಗಳು, ಗ್ರಾಹಕ ಕ್ಷೇತ್ರದಲ್ಲಾಗುತ್ತಿರುವ ಸ್ಪರ್ಧಾತ್ಮಕ ಬದಲಾವಣೆಗಳು ಎಲ್ಲವೂ ನಮ್ಮನ್ನು ಎಲ್ಲವನ್ನೂ ಕೊಂಡುಕೊಳ್ಳುವಷ್ಟು ಮಟ್ಟಿಗೆ ಮುಟ್ಟಿಸಿ ಕೈಬಿಟ್ಟಿವೆ. ನಾವೂ ಅತಂತ್ರ ಮನಸ್ಕರಾಗಿ ಯಾವುದನ್ನು ಕೊಂಡುಕೊಳ್ಳಬೇಕು, ಕೊಂಡುಕೊಳ್ಳಬಾರದು ಎನ್ನುವ ವಿವೇಚನೆ, ವ್ಯವಧಾನ ಎರಡನ್ನೂ ಕಳೆದುಕೊಂಡಿದ್ದೇವೆ. ಮೇಲಂತಸ್ತಿನ ಜನರಿಗೆ ನಿಮ್ಮ ನೆಚ್ಚಿನ ಹವ್ಯಾಸಗಳೇನು? ಅಂತ ಕೇಳಿದ್ರೆ SHOPPING!! ಅಂತ ಹೇಳುವಷ್ಟರ ಮಟ್ಟಿಗೆ ಬೆಳೆದಿದೆ ಈ ಕೊಳ್ಳುಬಾಕತನ. ಈ ಮಹಾನ್ ಪೆಡಂಭೂತದ ಕುರಿತು ವಿವರಿಸುವ ಎರಡು ನುಡಿ ಮೇಲಿನ ಕವನದಲ್ಲಿದೆ. ಕಣ್ಣಿಗೆ ಕಂಡದ್ದೆಲ್ಲ ಕೊಂಡುಕೊಳ್ಳಬೇಕೆನ್ನುವ ಹಪಾಹಪಿತನವನ್ನು ಸ್ವಲ್ಪ ಕಡಿಮೆಮಾಡಿಕೊಳ್ಳಿ ಎಂದು ನಾನು ನಿಮಗೆ ಇದರ ಮೂಲಕ ಸೂಚನೆ ನೀಡುತ್ತಿದ್ದೇನೆಂದು ಬೇರೆ ಹೇಳಬೇಕಾಗಿಲ್ಲ ತಾನೆ? ಆರ್ಥಿಕ ಹಿಂಜರಿತಕ್ಕೆ ಮೊದಲು ಬರೆದ ಕವನವಾದರೂ ಹಿಂಜರಿತದ ಸಮಯಕ್ಕೆ ಬಹಳವಾಗಿ ಒಪ್ಪುತ್ತದೆ ಅನ್ನೋದು ನನ್ನ ಅನಿಸಿಕೆ...
ಭಾನುವಾರ, ಮಾರ್ಚ್ 8, 2009
Software ಮಿತ್ರರಿಗೊಂದು ಪತ್ರ.
ಪ್ರಿಯ ಮಿತ್ರರೇ....
ಸದಾ ಇಂಗ್ಲೀಷಿನಲ್ಲಿ ಹರಟಲು ಯತ್ನಿಸುತ್ತ ಕನ್ನಡವ ಮರೆಯಲೆತ್ನಿಸುತ್ತಿರುವ ಕರುನಾಡ ಪುತ್ರ/ಪುತ್ರಿಯರೇ....
ಅಲ್ಲಿ ಮಹಾನಗರದೊಳಗೆ ಎಲ್ಲರೂ ಕ್ಷೇಮವೇ, ಸೌಖ್ಯವೇ?
ವಾರಾಂತ್ಯದ ಸ್ವಚ್ಛಂದ ಸ್ವಾತಂತ್ರ್ಯ ಸುಖದೊಳಗೆ ವಿಲಾಸ ಜೀವನಕ್ಕೆ ಕೊರತೆಯೇ?
ಪ್ರಿಯ ಮಿತ್ರರೇ....
ನನಗಿಲ್ಲ ನಿಮ್ಮಲ್ಲಿ ಅಸೂಯೆ, ನನಗಿಂತ ಹೆಚ್ಚು ಸಂಪಾದಿಸುವಿರೆಂದು ಎಂದಿಗೂ;
'ಸಂತೋಷದಿಂದಿರಲಿ ನಿಮ್ಮ ಮನಸು' ಎಂದು ಹಾರೈಸುವೆ, ನೀವೆನ್ನ ಆಪ್ತ ಬಂಧುಗಳು ಇಂದಿಗೂ.
ದಿನಾ "ಬೆಳ್ಳಿ ಮೂಡುವ ವೇಳೆಗೆ ಬಸ್ಸಿಗೆ ಜೋತು ಬಿದ್ದು, ಬೆಳದಿಂಗಳು ಬರುವ ವೇಳೆಗೆ ಮನೆಗೆ ಬಂದು" ಆರೋಗ್ಯ ಹಾಳಾದೀತು!! ಸ್ವಲ್ಪ ಜೋಪಾನ;
ಸಣ್ಣ ವಿಷಯಗಳಿಗಾಗಿ ಮನಸು ಬಿಸಿ ಮಾಡದಿರಿ, ಒತ್ತಡವೇರಿಸಿಕೊಳ್ಳದಿರಿ; ಕೊಂಚ ದೂರವಿರಲಿ-ಮದ್ಯ, ಧೂಮಪಾನ.
ಪ್ರಿಯ ಮಿತ್ರರೇ....
ವೇದವಾಕ್ಕುಗಳಂತೆ ನಮಗರ್ಥವಾಗದ programಗಳನು ಬರೆದರೂ- ಮಂತ್ರಾನುಷ್ಠಾನಗೈದ ಋಷಿಗಳಂತಾಗಿರಿ; ಆ ಮಂತ್ರದ ಆಳವನು ತಿಳಿದು.
ನಿಮ್ಮಂಥ ಅಮಾಯಕರನ್ನು ಯಾಮಾರಿಸುವ ನಯವಂಚಕರಲ್ಲಿ ತುಂಬಾ ಜನರಿದ್ದಾರೆ; ಎಚ್ಚರಿಕೆಯಿಂದಿರಿ!! ನಿಮ್ಮ ಸುತ್ತಲೂ ಸಂಯಮದ ಲಕ್ಷ್ಮಣರೇಖೆ ಎಳೆದು.
ದುಡ್ಡು ಕೊಟ್ಟು ಅತಿಥಿಗಳಾಗುವ (paying guest) ದೌರ್ಭಾಗ್ಯ (ಹೊಸ ಸಂಪ್ರದಾಯ!!) ಮಾಯಾನಗರಿಯಲ್ಲಿದೆಯಂತೆ, ಹೌದೇ?
Fast Foodಗಳಿಗೆ ಶರಣಾಗಿ ಆಕಾರ ವಿಕಾರ ಮಾಡಿಕೊಳ್ಳದಿರಿ,ಒಂದ್ವೇಳೆ ಬೊಜ್ಜು ಬಂದರೂ ಕರಗಿಸುವ,ಜೊತೆಗೆ ದುಡ್ಡನ್ನೂ ಕರಗಿಸುವ ಆರೋಗ್ಯ ಸಂಸ್ಥೆಗಳಿಗೆ ಅಲ್ಲಿ ಬರವೇ?
ಪ್ರಿಯ ಮಿತ್ರರೇ....
ದುಡ್ಡು ಮಾಡುವ ಛಾತಿಯೊಳಗೆ ಬದುಕಿನ ಸುಂದರ ಕ್ಷಣಗಳನ್ನು ಕಳೆದುಕೊಳ್ಳದಿರಿ; ದ್ರವ್ಯ ಸಂಗ್ರಹ ಮಾತ್ರವಲ್ಲ ಜೀವನದ ಪರಾಕಾಷ್ಠೆ.
ಹೆಚ್ಚಿನ ದುಡ್ಡಿಗಾಗಿ ಬೇರೆ Companyಗಳಿಗೆ ಹಾರಿ ಹಾರಿ ಹಣದ ಬಾವಿಯೊಳಗಿನ ಕಪ್ಪೆಯಂತಾಗದಿರಿ; ಎಲ್ಲಿ ಹೋದರೂ ನಿಮ್ಮಲ್ಲಿರಲಿ ಕರ್ಮನಿಷ್ಠೆ.
ಬಾಯಲ್ಲೆರಡು ಕನ್ನಡ ನುಡಿಯಿರಲಿ,ಮುಖದ ತುಂಬ ಹೂ ನಗುವಿರಲಿ; ಮನದೊಳಗಿರಲಿ ಅದೇ ಹಳೆಯ,ಮುಗ್ಧ ಪ್ರೀತಿ ತುಂಬಿದ ಕನಸು.
ಮರೆಯದಿರಿ ಈ ಬಡಪಾಯಿಯನು,ನಾಲ್ಕುದಿನ ನೆಮ್ಮದಿಗಾಗಿ ಬಂದು ಸ್ವೀಕರಿಸಿ ಆತಿಥ್ಯವನು; ಒಂದಾಗಿ ಸೃಷ್ಟಿಸೋಣ ಮನೆ-ಮನ ತುಂಬ ಹೊಸ ಹಗಲುಗನಸು.
ಪ್ರಿಯ ಮಿತ್ರರೇ.............
ಪ್ರಸ್ತುತ ಕವನವು ನನ್ನ ಬಹುತೇಕ ಸ್ನೇಹಿತರು ಹಿಡಿದಿರುವ ವೃತ್ತಿಯ ವೃತ್ತಿಪರ ಜಾಡನ್ನು ಹಿಡಿದು ಬರೆದದ್ದು. ಇದರಲ್ಲಿ ನನ್ನದಾಗಿ ಇರುವುದು ಅವರಿಗೆ ಹೇಳಿರುವ ಕಿವಿಮಾತುಗಳು, ಹಾರೈಕೆಗಳು ಅಷ್ಟೆ. ಉಳಿದವೆಲ್ಲ ಅವರು ಹೇಳಿರುವ ಮಾತುಗಳೇ, ಅವರ ಅನುಭವದ ಕತೆಗಳೇ ಆಗಿವೆ.
ಇದನ್ನು ಬರೆದದ್ದು 2007 dec ನಲ್ಲಿ. ಆಗ ಐಟಿ ಕ್ಷೇತ್ರದಲ್ಲಿ ಏರುಗತಿಯ ಓಟವಿತ್ತು. ಇತ್ತು ಅಂದ್ರೆ ಈಗ ಇಲ್ಲ ಅಂತ ಅಲ್ಲ. ಆದರೆ ಅಂತಹ ಸ್ಥಾನದಿಂದ ಕೆಳಗೆ ಬಂದಿದೆ. ಆದರೂ ನಮ್ಮ ಸ್ನೇಹಿತರ ಪರಿಸ್ಥಿತಿ ಏನೂ ಬದಲಾಗಿಲ್ಲ. ಇನ್ನೂ ದುಸ್ತರವಾಗಿದೆ ಅಷ್ಟೆ. ಎಂಟು ಗಂಟೆವರೆಗೆ ಇರುತ್ತಿದ್ದವರು ೧೦ ಗಂಟೆವರೆಗೆ ಇರುವಂತೆ ಆಗಿದೆ.
ನನ್ನ ಹುಡುಗಿಯ ಬಗ್ಗೆ..........
ಹಕ್ಕಿ ಕೊರಳೊಳು ಕುಳಿತು,ನನ್ನ ಹೆಸರನು ಕರೆದು ಕವಿಕೃತಿಯ ಪ್ರಕೃತಿಯೆ ತಾನಾಗಿ ಬೆಳೆದಿರುವಳೆನ್ನ ಬೆಡಗಿ.
ಜಿಟಿ ಜಿಟಿ ಸುರಿಯುವ ಮಳೆಯಲ್ಲಿ, ಕೈಯ್ಯ ಕೊಡೆ ಕಿತ್ತೆಸೆದು, ನನ್ನೆದೆಯ ಕಾರ್ಮೋಡ ಕರಗಿಸಿ, ಎದೆಗೆ ಪ್ರೀತಿ ಸೋನೆ ಸುರಿಸಿದವಳು.
ಬೆಳಗಿದಿಬ್ಬನಿಯ ನಡುವೆ ತೂರಿದೆಳೆ ಬಿಸಿಲಿಗೆ ಮೈಕಾಯಿಸಿದಂತೆ ನನ್ನ ಹೃದಯವನು ಕಾಯಿಸಿ ಬೆಚ್ಚಗೆ ಬಚ್ಚಿಟ್ಟಿಹೆನಾಕೆಯನು; ಅವಳೊಂದು ಅಮೂಲ್ಯ ಹರಳು.
ಎಲ್ಲ ನಾದ, ಎಲ್ಲ ವೇದ, ಸರಸ-ಸಲ್ಲಾಪದ ಅಮೋದ-ಪ್ರಮೋದ,ಎಲ್ಲಿ ಮನ ಹರಡಿದರೂ ಅವಳದೇ ನಿನಾದ.
ಕೇಳುತ್ತ ಕೇಳುತ್ತ ಆ ಮಧುರ ಕಲರವ ನಿನಾದ, ಕರಗಿ ಹೋಗಿದೆ ಮನವು-ಸವಿಯುತ್ತ ಅವಳ ಸಿಹಿನುಡಿಗಳ ಸ್ವಾದ.
ಯತ್ನವಿಲ್ಲದೆ ಮೂಡಿದೆಯವಳ ಮೊಗದಲಿ ನನ್ನೆಡೆಗೆ ಮುಗುಳ್ನಗೆ-ಸುರಿಸಿ ಅನಂತ ಮುತ್ತುರತ್ನಗಳ. ಸಾಗರ ಮೀರಿಸುವಂತೆ-ನಗೆಯ ಜೊತೆಗೆ.
ಈ ಪುಟ್ಟ ಎದೆಯಲಿ ಎಷ್ಟು ತಾನೆ ತುಂಬಿಸಿಕೊಳ್ಳಲಿ ಅದನು ನಾನು? ಅದಕಾಗಿಯೇ ಜಾಣ್ಮೆಯಲಿ ಅವಳ ಪುಟ್ಟ ಹೃದಯವನೇ ಕದಿಯುತಿರುವೆ ಜೊತೆ ಜೊತೆಗೆ!!
ನನಗೆ ತಿಳಿಯದಂತೆಯೇ ನಾ ಲಯವಾಗುತಿರುವೆ,ಸೃಷ್ಟಿಸಲು ಹೋಗಿ ನಿನ್ನ ಮುಗ್ಧ ಪ್ರೇಮ ಕುರಿತ ಕವಿತೆಯನು.
ಸಿಹಿಸಾಗರದೊಳಗೆ ಕಲ್ಲು ಸಕ್ಕರೆಯಂತಾಗಿ,ಕರ ಕರಗಿ ನಿನ್ನ ಹೃದಯದೊಳು ಮೂಡಲೆತ್ನಿಸುತಿರುವೆ ನಾನು.
ಬಾಂದಳದಲಿ ಕಂಡ ದೇವತೆಯೆ ನೀನು,ಕೊಟ್ಟು ಕರುಣಿಸು ದೇವಿ-ನಿನ್ನ ಪ್ರೀತಿಯಮೃತದ ಬಿಂದಿಗೆಯಲೊಂದು ಬಿಂದು.
ಉಕ್ಕಿ ಹರಿಯದೇ ಅದರಿಂದ ಹಿಗ್ಗಿ ಹಿರಿದಾಗಿ ಹುಚ್ಚೆದು,ಅದೃಶ್ಯ ಸರಸ್ವತಿಯಂತಿರುವ ಎನ್ನ ಸೌಭಾಗ್ಯ ಸಿಂಧು?
ಸಿಗದಿರಬಹುದು ನೀನು ಚಿಂತೆ ಕಿಂಚಿತ್ತಿಲ್ಲ;ಒಡಮೂಡಿರಲು ಅಡಿಯಲಡಗಿದ್ದ ಮನದ ಪ್ರೇಮ ದೀಪ.
ಕಿರುಸೆಲೆಯಲಿ ಚಿಮ್ಮಿ ಉಪನದಿಗಳಿಂದುಕ್ಕಿ ಜೀವನದಿಯಾದರೂ ಕೊನೆಗೆ ಮುಟ್ಟುವ ನದಿ ತೆರದಿ, ಈ ಪ್ರೀತಿ ಹರಿವಿಗೆ ನೀನೆ ಆದಿ ಅಂತ್ಯ ಸ್ವರೂಪ.
ಶೃತಿ ಸೇರಿಸಿ ಹಾಡುತಿರು ಜೊತೆಗಿದ್ದು ನನ್ನ ಮಾನಸವೀಣೆಯ ಮಿಡಿತಕೆ ಹರಿಸಿ ಪ್ರೇಮ ರಾಗ;
ಯಜ್ಞದೇವತೆ ನೀನೆ, ಯಾಗಫಲವೂ ನೀನೆ, ಎನ್ನ ಯಜಮಾನ್ಯದಿಂದಿರಲು ಪ್ರೇಮ ಯಾಗ.
ಶನಿವಾರ, ಮಾರ್ಚ್ 7, 2009
ಹಾಸ್ಟೆಲ್ ಹುಡುಗನ ದಿನಚರಿ
ಬೆಳಿಗ್ಗೆ೬-೩೦ ಅಥವಾ ೭-00
ಏಳು ಮೇಲೇಳು ತಡಬಡಿಸಿ ತಲೆಕೆಡಿಸುವ Alarm ಹೊಡೆದು;
ದೃಶ್ಯ ಮಾಧ್ಯಮದ ಜಾಹಿರಾತುಗಳಂತೆ ಮೇಳೈಸುತ್ತಿದ್ದ ಕನಸುಗಳನಲ್ಲೇ ಬಡಿದು.
ಅರೆಪ್ರಜ್ಞೆಯಲ್ಲಿಯೇ ಬಾಯಿಗೆ ಬ್ರಶ್ಶು, ಜೊತೆಗೆ ಪೇಸ್ಟನು ನೂಕಿ,
ಹಿಂದಿನ ದಿನದ ಶೇಖರವಾಗಿರುವ ಬೇಡದ ವಸ್ತುಗಳನು ಹೊರಗೆ ಹಾಕಿ.
ಕಣ್ಣು ತೆರೆಯುದರೊಳಗಾಗಿ ಆಗಲೇ ಬಚ್ಚಿಲಿಗೆ ಜನರ ಸಾಲು
ಬಕೆಟ್ ,ಟವೆಲ್ ,ಬನಿಯನ್...ಇತರೆ ಹಿಡಿದು Bathroom ಕಡೆ ಹಾಕು ದಾಪುಗಾಲು.
ಆಯ್ತು ಸ್ನಾನ,ನಂತರ ಧ್ಯಾನ,ಮಂತ್ರ ಪಠನ,ಸಂಧ್ಯಾವಂದನೆ;
ಭಗವಂತಾ...ಒಳ್ಳೇ ಬುದ್ಧಿ ಕೊಟ್ಟು ಕಾಪಾಡು ಇವತ್ತಿಂದಾನೇ!!
೭-೩೦ - ೭-೪೫ ತಿಂಡಿ:
ಅಯ್ಯೋ ಟೈಮು ಆಗೇಬಿಟ್ತು, ತುರುಕು ಮೈಯ್ಯನ್ನು ಪ್ಯಾಂಟು ಶರ್ಟಿನೊಳಗೆ.
ಓಡು ಮೆಸ್ಸಿಗೆ,ಹಿಡಿ ತಟ್ಟೆಯನು supplier ಮುಂದೆ ಯಾವುದೋ ಬೇಕೆನಿಸದ ತಿಂಡಿಗೆ.
ತಿನ್ನುವ ಮಧ್ಯದಲ್ಲಿ ಅದು ಇದು ಹತ್ತಾರು ಮಾತಾಡಿ ಚಾ ಕುಡಿ.
ತಿಂಡಿ ಚೆನ್ನಾಗಿಲ್ಲದಿದ್ದರೆ ಮ್ಯಾನೆಜರನಿಗೋ ಇನ್ನಾರಿಗೋ ಸ್ವಲ್ಪ ಜಡಿ.
೭-೫೫ - ೧೦-00
ಬೆಲ್ಲಾಗದಿದ್ದರೆ ಹೋಗು ಆರಾಮಾಗಿ,ಅಥವಾ ಬೇಗ ಹೋಗಿ ಹಿಡಿ-ಹಿಂದಿನ ಸೀಟು;
ಬೆಲ್ಲಾಗಿದ್ದರೆ ಎಚ್ಚರಿಕೆಯಿಂದ ತಪ್ಪಿಸಿಕೊ ಪ್ರಿನ್ಸಿಪಾಲರಿಂದ,ಇಲ್ಲದಿರೆ ಕಾದಿದೆ ಕೊರೆತದ ಚಾಟಿ ಏಟು.
ಕುಳಿತುಕೊ ಕ್ಲಾಸಲ್ಲಿ ಆದಷ್ಟು ತಾಳ್ಮೆಯಿಂದ;ಆದ್ರೆ ಪಾಠ ಕೇಳು,ಅಥವಾ ಮೇಷ್ಟ್ರು ನೋಡದಿದ್ದಲ್ಲಿ ನಿದ್ದೆ ಮಾಡು.
ಬೇರೆಯವರಿಗೆ disturb ಮಾಡದಿರಲು mobileಗೆ ಹಾಕಿಡು silent ಮೋಡು.
೧೦-00-೧೦-೩೦
ನೋಡು ಮಗಾ,ಇದೇ peak time. ಸರಿಯಾಗಿ ನೋಡಿಬಿಡು ಹರೆಯದ ಹುಡುಗಿಯರ ರೂಪರಂಗುಗಳನ್ನು ಕಣ್ ತಣಿಯುವಷ್ಟು
ಮತ್ತೆ ಈ opportunity ಸಿಗೋದು ನಾಳೆಯೇ! ಅದೂ guarantee ಇಲ್ಲ!! ಆದ್ದರಿಂದ ಈಗಲೇ ನೋಡಿಬಿಡು ಮನತಣಿಯುವಷ್ಟು.
call ಬಂದ್ರೆ ಓಡು ಟಾಯ್ಲೆಟ್ಟಿಗೋ,ಟೆರೇಸಿಗೋ ಇಲ್ಲದಿರೆ ಹಿಡಿದು ಫೈನ್ ಹಾಕ್ತಾರೆ ಯಾರಾದ್ರು ಗುರುಗಳು.
ಈ ಹೊತ್ತಿನ ನಂತರ fashion showನ ಗಂಡು ಹೆಣ್ಣುಗಳಂತೆ ಸುತ್ತಲು ತೊಡಗುತ್ತಾರೆ,ಕಾಲೇಜಿನ ಪ್ರಸಿದ್ಧ ಜೋಡಿಗಳು.
೧೦-೩೦ ರಿಂದ ೧೨-೩೦ ಅಥವಾ ೧-೩೦
ಮತ್ತೆ ಅದೇ ಕ್ಲಾಸುಗಳ ರಿಪಿಟೇಶನ್ನು, ಕ್ಯಾಲ್ಕುಲೇಶನ್ನು.
ಅಲ್ಲೇ ಬೇಕಾದ್ರೆ ಎಣಿಸಿಬಿಡು,೭೫%ಗೆ ಇನ್ನು ಎಷ್ಟು ಬಂಕ್ ಹೊಡೆಯಬಹುದು ಅನ್ನೋದನ್ನು.
ಬೇಜಾರಾದ್ರೆ ಮಧ್ಯೆ ಮಧ್ಯೆ ಆ ಕಡೆ ಈ ಕಡೆ ತಿರುಗಿ ಹುಡುಗಿಯರ ನೋಡು;
mechanical branchನೋರಿಗೆ ಈ ಅದೃಷ್ಟವೇ ಇಲ್ಲ, ದೇವರೇ... ಅವರನ್ನು ಕಾಪಾಡು.
ಊಟ:
ಹೋಗು ಮೆಸ್ಸಿಗೆ-ಊಟ ಮಾಡು.ನಿದ್ರೆ ಬಂದ್ರೆ ರೂಮಲ್ಲಿ ಸ್ವಲ್ಪ ಒರಗು.
ಈ ಸಮಯದಲ್ಲೇ localites ಬಂದು ತಲೆ ತಿನ್ನುತ್ತಾರೆ,ಮನಸ್ಸಿಗೆ ಅದೇ ಕೊರಗು.
ಮತ್ತೆ ಕ್ಲಾಸೋ ಲ್ಯಾಬೋ ಇರುತ್ತೆ,ಬರಿ journal-observation ಬೇಗ ಬೇಗ.
ಎಲ್ಲ confuse readingಗಳೇ ಇಲ್ಲ!! ಇರಲಿ ಬಿಟ್ಟಿರು ಸ್ವಲ್ಪ ಜಾಗ.
೨-೦೦ lab:
ಕಿವಿಗೆ ಹಾಕಿಕೋ lab ಎಲ್ಲಾ instruction ,ಇನ್‌ಫರ್‌ಮೇಶನ್ನು;
journal ಸರಿ ಇಲ್ಲ, graph ಯಾಕೆ ಹೀಗೆ? ಅಂತ ಬೈಸಿಕೊಳ್ಳಬೇಕಿದೆ ಇನ್ನೂ.
lab ಮುಗಿಯಿತೇ? ಸರಿ ಸರಿ ಬೇಗ ಹೊರಡು ಏನೋ ಬಹಳ ಕೆಲಸವಿದ್ದವನಂತೆ;
ಕೆಲಸ ಇನ್ನೇನಿಲ್ಲ, ಹಾಡು ಕೇಳುವುದು,film ನೋಡುವುದು, game ಆಡುವುದು, ಬರೀ ಇವೇ ಗೊಬ್ಬರ ಸಂತೆ.
ಸಂಜೆ ೫-೦೦ ಚಹಾ ಸಮಯ:
ಹೊಟ್ಟೆ ಹಸಿಯಿತೆಂದರೆ ಹೋಗು hostel ಹಿಂದ್ಗಡೆ ಇರೋ ಠಪರಿಗೆ;
ತಗೋ ಗಿರ್‍ಮಿಟ್ಟು,ಆಮ್ಲೇಟು.ಅಲ್ಲೇ ಬೆಂಚು ಕಲ್ಲುಗಳ ಮೇಲೆ ಕುಳಿತು ಹಂಚಿಕೊಳ್ಳುತ್ತಾರೆ ಹುಡುಗರು ಸಿಗರೇಟು.
ಶುರುಮಾಡು ರೂಮಲ್ಲಿ ಜೊತೆ ಸೇರಿ ಕಾಡುಹರಟೆ ಪಟ್ಟಾಂಗ;
ಗಾಸಿಪ್ ತಿಳಿಯದಿದ್ದರೆ ತುಂಬಾ loss, ಅದೇ ಇಲ್ಲಿಯ ಜೀವನದ ಅವಿಭಾಜ್ಯ ಅಂಗ.
ಅಯ್ಯೊ ಇವನು ಅವಳಿಗಿವತ್ತು ಡಿಕ್ಕಿ ಹೊಡೆದನಂತೆ!!
ಪಾಪ.. ಇವತ್ತು ಬೆಳಿಗ್ಗೆ ನಮ್ಮ ಸುಬ್ಬನ ಮೊಬೈಲ್ ಕಾಣೆಯಾಯ್ತಂತೆ.
ಯಾರೋ lecturer ಹಾಕಿದರಂತೆ ಆ ಹುಡುಗನಿಗೆ ಛೀಮಾರಿ,
ಅವಳು,ಆ ಹುಡುಗಿ ಏನು ಮಸ್ತಾಗಿದ್ದಳೋ ಮಗಾ,ಅವಳ ಹೆಸರೇನಂದೆ ಮರಿ?!!
ಇಲ್ಲಿ ಯಾವ ಸೆನ್ಸಾರೂ ಇಲ್ಲ,ಬರುತ್ತೆ ಎಲ್ಲಾ ವಿಷಯ ಕಚ್ಚಾ ಆಗಿ.
ಗಂಟೆ ೭-೩೦ ಆಗ್ತಾ ಇದೆ,ಎಲ್ಲರೂ ಊಟಕ್ಕೆ ನಿಧಾನವಾಗಿ ತಯಾರಾಗಿ.
ರಾತ್ರಿ ೭-೩೦ ಊಟ:
ಅದೇ ಆಲೂಗಡ್ಡೆ ಪಲ್ಯ,ಸಾರು ನೀರು,ಚಪಾತಿ ರಬ್ಬರು;
ಬೇಡವೆನಿಸಿದರೆ ಹೋಗು fast foodಗೆ, ಪಾಪ ಅವರಿಗೂ ಬೇಡವೇ ಗಿರಾಕಿಗಳು ನಿಮ್ಮಂಥೋರು.
ಆಯಿತು ಊಟ,ಈಗ ಸ್ವಲ್ಪ ಓದುವ ಮನಸು;
ಬುಕ್ಕು ಹಿಡಿಯಹೋದರೆ ಶುರುವಾಗುತಿದೆ ನೂರೆಂಟು ಕನಸು.
ಇದೇನು ಮಹಾ, ಓದ್ಬೋದು I.A Exam ಹಿಂದಿನ ದಿನ;
ಹಾಗಾದ್ರೆ ಈಗ ಏನಿಲ್ಲ ಕೆಲಸ,ಮಾಡು ಸುಮ್ಮನೆ ಕಾಲಹರಣವನ್ನ.
ರಾತ್ರಿ ೧೦-೩೦ - ೧೧-೩೦:
ಮಾತಾಡುವಷ್ಟು ಮತಾಡಿ,ಹುಡುಗಿಯರಿಗೆಲ್ಲ ಆ ದಿನ free ಇರುವಷ್ಟು SMS ಮಾಡಿ;
ಮಲಗುವ ಮುಂಚೆ ಏನೆಂದು ಉದ್ಗರಿಸುತ್ತಾನೆ ಗೊತ್ತೇ ನಮ್ಮ ಹುಡುಗ?-
ಇವತ್ತು ಸುಮ್ಮನೆ ಎಷ್ಟು time waste ಆಯ್ತು ನೋಡಿ! ನಾಳೆಯಿಂದ ಓದಲೇ ಬೇಕು ಸರಿಮಾಡಿ!!
ಅರ್ಥವಾಗದ ಪದಗಳು:ಠಪರಿ-ಪೆಟ್ಟಿಗೆ ಅಂಗಡಿ, ಗಿರ್‍ಮಿಟ್-ಚರುಮುರಿ.
ಈ ಕವನ ನನ್ನ ಮನದೊಳಗಿಂದ ಮೂಡಿದ್ದು ಸುಮಾರು ೮ನೇ ಸೆಮಿಸ್ಟರ್ ಇದ್ದಾಗ. ನನ್ನ ಹಾಸ್ಟೆಲ್ ಜೀವನದ ಅನುಭವದ ಪಾಕ ಈ ಕವನ.ಈ ಕವನದ ಯಾವುದೋ ಒಂದು ಪ್ಯಾರದಲ್ಲಿ ನಾವೂ ಒಂದು ಭಾಗವಾಗಿರುತ್ತೇವೆ ಎಂದು ನಿಮಗನ್ನಿಸಿರುವುದೆಂದು ಭಾವಿಸಿದ್ದೇನೆ. ಇದನ್ನು ಬರೆಯಬೇಕೆಂದು ಅನ್ನಿಸಿದ್ದು ನಾನು ನಮ್ಮ ರಾಷ್ಟ್ರಕವಿ ಶಿವರುದ್ರಪ್ಪನವರ "ಮಬ್ಬಿನಿಂದ ಮಬ್ಬಿಗೆ" ಎಂಬ ಗಹನ-ಗಂಭೀರ ವಿಚಾರಧಾರೆಗಳುಳ್ಳ ಕವಿತೆಯನ್ನೋದಿದ ನಂತರ!!. ಆದರೆ ನನಗೇಕೆ ಅದನ್ನು ಓದಿ ಇಂಥಾ ಹಾಸ್ಯ ಮಿಶ್ರಿತ ಕವಿತೆ ಬರೆಯಬೇಕೆಂದೆನಿಸಿತೋ ನನಗೂ ಗೊತ್ತಿಲ್ಲ!!.
ನಾವು ಓದುತ್ತಿದ್ದಾಗ mobile squad ಗಳು ಇರ್ತಾ ಇದ್ವು. ಈ ಕಾಲಕ್ಕೆ ಏನೇನಾಗಿದೆ ಗೊತ್ತಿಲ್ಲ.
ಬೆಂಬಲಿಗರು
ಬ್ಲಾಗ್ ಆರ್ಕೈವ್
ನನ್ನ ಬಗ್ಗೆ
- chaitanya chintana
- electrical engineer working in Mangalore chemicals and fertilisers. Mangalore