ಶನಿವಾರ, ಜನವರಿ 22, 2011

ವಾಲ್ಮೀಕಿ ಹೃದಯ.

ಗಿರಿ ತೊರೆಗಳ ತರುಲತೆಯಲಿ ನಲಿದಾಡಿವೆ ಉಲಿದು;
ಗಂಡು ಹೆಣ್ಣು ಬೇರೆ ಏನು? ಎಂದೊಲವಲಿ ನುಡಿದು.
ಎದೆಯೊಳಗಡೆ ನೆಗೆದಾಡಿದೆ ನಾಗರಮಿಡಿ ನೆಗೆದು,
ಹೃತ್ಕಮಲದ ಅಧೋಮುಖವು ರವಿ ಕಾಣಲು ಬಿರಿದು.

ಸುರತ ಸಂಗ ಸಂಭ್ರಮದಲಿ ಜೀವವೆರಡು ಏಕ.
ಪ್ರೇಮಾರ್ಪಣ ಸಂಯೋಗದಿ ತಾಣವದುವು ನಾಕ.
ನಾರುಮಡಿಯ ಆದಿಕವಿಯ ಹೃದಯ ಹ್ಲಾದ ಪಾಕ.
ನಲಿವಿನೊಲವು ಕಂಡು ಕಿವಿಯು ಕಣ್ಣಾಯಿತು ಮೂಕ.

ಕಣಕಣದಲಿ ಅನುರಣಿಸಿದೆ ಪಕ್ಷಿ ಪ್ರೇಮ ಗಾನ.
ಕ್ಷಣ ಕ್ಷಣಕೂ ಗುಣಿ ಗುಣಿಸಿದೆ ಪ್ರಣಯಿಗಳ್ ಇನಿ ತಾನ.
ಕವಿ ಹೃದಯದಿ ಜಿನುಗುತಿದೆ ಆನಂದದ ಬಾಷ್ಪ.
ಋಷಿ ಮನದಲಿ ರಸವುಕ್ಕಿದೆ. ಅರಳುತ್ತಿದೆ ಪುಷ್ಪ.

ಅಷ್ಟರಲ್ಲೇ ಬಾಣವೊಂದು ಹಠಾತ್ತಾಗಿ ನುಗ್ಗಿ ಬಂದು ರೆಪ್ಪೆಯೊಂದು ಹರಿಯಿತು.
ಆತ್ಮದ ಅದ್ವಯತೆ ಒಡೆದು, ಚೀರಾಟವು ತಾರಕಕ್ಕೆ ಪಾತಾಳಕೂ ಕೇಳಿತು.
ಎಲವೆಲವೋ ಕಟುಕ ಬೇಡ..! ಬೇಕೇ ಏನು ನಿನಗಿದು?
ಗಂಡು ಹೆಣ್ಣು ಕೂಡಿ ಇರಲು ಬಿಡದುದಾವ ಮನಸಿದು?”

ಎದೆ ನೊಂದಿತು. ಮನ ಮುದುಡಿತು. ವಿಷಾದ ರಸವು ಹರಡಿ.
ಹುತ್ತದ ಮಿಡಿ ಬುಸುಗುಟ್ಟಿತು; ನೀರಜ ಮೇಲ್ಮುಖವಾಗಿ.
ಸರ್ಗದ ಕ್ರಿಯೆ, ಲಯ ಪ್ರಕ್ರಿಯೆ, ಸ್ಥಿತ ಪ್ರಜ್ಞೆಗೆ ಬಂತು.
ಜೀವದ ನೋವೇ ಜಗದ ನೋವುಕಾವ್ಯದ ನೆಲೆ ಬಲಿತು.

ಧ್ಯಾನಮನದಿ ಋಷಿ ಹೃದಯದಿ ಕವಿ ಸಮಯವು ನೆಗೆದು,
ಛಂದ, ಕಂದ, ವೃತ್ತ ಬಂಧ; ನವರಸಗಳು ಹರಿದು.
ಮೈತಳೆದಿದೆ ಮಹಾಕಾವ್ಯ ರಾಮಾಯಣದರ್ಶನ.
ಹುತ್ತ ಬಿಟ್ಟ ಹಾವು ಕಂಡರದೇ ಸುಕೃತ ದರ್ಶನ.

ರಾಮಾಯಣದ ಆರಂಭಕ್ಕೆ ಕಾರಣವಾದ ಕ್ರೌಂಚವಧೆಯನ್ನು ಅವಲೋಕಿಸಿದ ಪರಿಣಾಮ ಈ ಕವನ. ಸ್ವಲ್ಪ ಆಧ್ಯಾತ್ಮದ ತುಣುಕುಗಳೂ ಒಳಗೆ ಸೇರಿವೆ. ಪ್ರಿಯ ಮಿತ್ರರು ಎಲ್ಲವನ್ನೂ ಸ್ವೀಕರಿಸುತ್ತೀರೆಂದು ತಿಳಿದಿದ್ದೇನೆ.

ರೇಣುದಂಡ


ಅಮ್ಮ ಅಂದರೆ ಸುಮ್ಮನೆ ಅಲ್ಲ.......ಆದರೆ ಗುಮ್ಮ ಅಲ್ಲ....

ಶುಕ್ರವಾರ, ಜನವರಿ 21, 2011

ವಾಕ್ಕರುಣ.

ನಾದಮೇಳಗಳೊಳಗೆ ರಾಗರಂಗಿನ ಹೊಳೆಗೆ ಹೊಳೆಯುತ್ತ ಹರಡಿರುವ ಶೃತಿ ಧಾತ್ರಿ ತಾಯೆ!
ನೃತ್ಯ ನೂಪುರದಲ್ಲಿ ತಾಳ ತಂಬೂರಿಯಲಿ ಕಾಣದೇ ಕಾಣುತಲಿರುವೆ; ನೀ ನಾದ ಮಾಯೆ!
ನಿನ್ನ ವಾಣಿ ವಿಲಾಸ- ನುಡಿ ಅರ್ಥ ವಿಸ್ತರಿಸೆ, ರಸ ಋಷಿಯು ಆಗುವನು ಮಂತ್ರ ದ್ರಷ್ಟಾರ.
ನಿನ್ನ ವೀಣೆಯ ನಾದ ನೂರುರಾಗದಿ ನುಡಿಯೆ, ನೆಲಮುಗಿಲ ನಡುವಿನಲಿ ಸಿಡಿಲ ಸಂಚಾರ .

ಶಬ್ದದಡವಿಯ
ನಡುವೆ ಸಿಲುಕಿರುವೆ ನಾನೀಗ. ಮರ ಮರದ ಮರ್ಮರವ ಕೇಳುತ್ತ ಕುಳಿತು.
ಹಣ್ಣೆಲೆಯು ಮಣ್ಣಾಗಿ, ಹಣ್ಣು ಬೀಜಗಳಾಗಿ ಚಿಗುರೊಡೆದ ಮೊಳಕೆಯಲಿ ಹೊಸ ಅರ್ಥ. ಧಾತು.
ಕಾಡಿನೆಲ್ಲೆಡೆ ಚೆಲುವು - ಕಾವ್ಯದಲ್ಲಿನ ಒಲವು ಹರಿದಂತೆ, ಸುರಿದಂತೆ ನಲಿದು;
ಮುಡಿಗೇರಬಯಸದ, ಮಡಿಯಾಗಲೊಲ್ಲದ ವನಸುಮದ ಪರಿಮಳವು ತೇಲಿಬಂದು.

ನೆಲ ಮುಗಿಲ ಸಂಧಿಸುವ ಸಂಭ್ರಮದ ಕ್ಷಣಕಾಗಿ ಬೇರೂರಿ ಕುಳಿತಿದೆ ಮರ, ಹಾರಲಿಕ್ಕೆ.
ಕಳಿತ ಫಲವೊಂದಕ್ಕೆ ಕಾದಿರುವೆ ನಾ ಕೆಳಗೆ. ಮರ ಪೂರ ಅರಗಿಸುವ ಸಾಹಸಕ್ಕೆ.
ಗೊಂಚಲಿಗೆ ಕೈ ಮಡಗಿ ದೀನನಾಗಿಹೆ ನಾನು; ಕರುಣಿಸು ಹೂಗಳನು ಮಾಲೆ ಕಟ್ಟಲಿಕ್ಕೆ.
ಮಧು ಬಟ್ಟಲಿಂದೊಂದು ಹನಿಯ ಬೇಡಿಹೆ ನಾನು; ಉದ್ಗೀಥದುದ್ಗಾರ ಮಾಡಲಿಕ್ಕೆ.

ಉದರದೊಳಗದರುತಿಹ ಪದ ನಾದ ಹೊರಹೊಮ್ಮಿಸು; ದವಡೆಗಳ ನಡುಸಿಕ್ಕಿ ಸಾಯದಂತೆ.
ಶಬ್ದ ನಿಧಿ ಪ್ರಾಂತದೆಡೆ ಕುಡಿ ನೋಟ ತೊಡು ಸಾಕು; ಅರ್ಪಿಸುವೆ ನವರತ್ನ ಕೃತಿಯ ಕಂತೆ.
ಪ್ರಜ್ಞೆಗೊಂದಾಜ್ಞೆ ಕೊಡು. ಸನ್ನಿಯಮಲುಣಿಸದಿರು. ಯಜ್ಞ ದೇವತೆ ನೀನು. ನಾನೊಂದು ದರ್ವಿ.
ಸರಸ್ವತೀ ಪ್ರವಾಹಕ್ಕೆ ಎದೆ ಸೆಟೆವ ಹೃದಯ ಕೊಡು. ಗುಂಡಿಗೆ ಕಾಂಡಕ್ಕೆ ಹರಿಸಿ ಅರುಣ ರಶ್ಮಿ.

ನನ್ನ ಸಂವೇದನೆಗಳಿಗೆ ಪದಗಳೇ ಸಿಕ್ಕದೆ ಪರದಾಡಿ ಕೊನೆಗೆ ವಾಕ್ಕಿನ ಅಧಿದೇವತೆಯಾದ ಶಾರದೆಯನ್ನು ಪ್ರಾರ್ಥಿಸಿದ ಕವನ ಇದು. ಬರೆದು ತುಂಬ ದಿನ ಆಯ್ತು. ಒಮ್ಮೆ ನನ್ನ ಭಾವನೆಗಳು ಮಾತಿನ ರೂಪ ಪಡೆಯಲು ಒದ್ದಾಡುತ್ತಿದ್ದಾಗ ಇದನ್ನು ನಾನು ಬರೆದಿದ್ದೆ. ಇದು ವಾಕ್-ಅರುಣವೂ ಹೌದು. ವಾಕ್-ಕರುಣವೂ ಹೌದು.

ಗುರುವಾರ, ಏಪ್ರಿಲ್ 30, 2009

ಧಾರವಾಡ

ಅಲ್ಲಿನ ಮಣ್ಣಿನ ಕಣಗಳೇ ಹಾಗೆ.
ಹುಚ್ಚನ ತಲೆ ನೆಟ್ಟಗಾಗಿಸುವ ಔಷಧಿಯ ಹಾಗೆ.
ಹೃದಯವಿರದವರಲ್ಲಿಯೂ ನಾಡಿ ಮಿಡಿಸಿದ ಊರು.
ಜನರ ಹೃದಯಗಳು ಮೃದು; ಆದರೆ ಬಾಯಿ ಸ್ವಲ್ಪ ಒರಟು, ಜೋರು.

ವರ್ಷ ವರ್ಷಗಳಿಂದ ನನ್ನ ತಲೆಯಲ್ಲಿ ಹೂತು ಹೋಗಿದ್ದ ಕವಿ ಕಳೆಬರವ ಹಿಡಿದೆತ್ತಿ,
ಅಂತಃಕರಣ, ಆತ್ಮೀಯತೆಯ ಆತ್ಮಜ್ಯೋತಿಯು ವಕ್ಷಪೀಠವ ಹತ್ತಿ.
ಸ್ನೇಹ ಸಂವಹಿಸಿತು, ಪ್ರೀತಿ ಪ್ರವಹಿಸಿತು. ಭಾವ-ಮುದ್ರೆಯ ಒತ್ತಿ.
ಪೇಲವ ಹೃನ್ಮನದೊಳಗೆ ನೂರು ಬಣ್ಣಗಳ ಚಿತ್ತಾರ, ಸಂಪನ್ನವಾಯಿತು ಚಿತ್ತ ಭಿತ್ತಿ.

ಸಾಧನಕೇರಿಯೊಳಗಿಂದ ಹೊರಹೊಮ್ಮುತಿದೆ ದಶದಿಸೆಗೆ, ಪದಗಾರುಡಿಗನ ನಾಕುತಂತಿಯ ಏಕತಾರಿ;
ಹೂಮುಡಿದು ಕೈಮುಗಿದು ಭೀಮಕಾಯನಿಗೊಂದು ನಮನ, ಜನಜಾತ್ರೆಯಾಯ್ತು ಶನಿವಾರದ ನುಗ್ಗಿಕೇರಿ.
ನಾದೋದ್ಧಾರಕ್ಕಾಗಿ ಗಂಗೆಯೇ ಅವತರಿಸಿಹಳಿಲ್ಲಿ- ನಿತ್ಯ ನೂತನಳಾಗಿ, ನಿರಂತರ ಸುಧೆಯಾಗಿ.
ನೆನೆದರೆ ಈಗಲೂ ಬಾಯಲ್ಲಿ ನೀರೂರುವುದು, ಅಂದು ಚಪ್ಪರಿಸಿ ಸವಿದ ಅಜ್ಜಿಯ ಕೈಯ್ಯಡುಗೆ-ಗೋಧಿಹುಗ್ಗಿ.

ಕಲ್ಲೆಸೆದ ಕಡೆಗೆಲ್ಲ ಸಾಹಿತಿಗಳೇ ತುಂಬಿರುವರಂತೆ; ರಕ್ತದೊಳಗಡೆ ಬೆರೆತು ಸಾಹಿತ್ಯದಮೃತ.
ಸಂತ ಷರೀಫರ ತವರು; ಮುನಿ ಮಹಾಂತರ ಬೆವರು; ಭಾವದೊಂದಿಗೆ ಬೆಸೆದಿದೆ ಕನ್ನಡ. ಬೇರೆ ಇಲ್ಲ ಸರ್ವಥಾ.
ತಟ್ಟಿ ರೊಟ್ಟಿಯನು ಗಟ್ಟಿ, ಜೊತೆಗೊಂದು ಹಿಡಿ ಪ್ರೀತಿಯನೂ ಅದಕೆ ಕಟ್ಟಿ, ಥಾಟಿನಲಿಟ್ಟು ಪಕ್ಕದಲಿ ಚಟ್ನಿಪುಡಿ, ಮಗ್ಗುಲಲಿ ಬಟ್ಟಲು ಕಾಳು ಪಲ್ಯದ ಖಾನಾ
ಕೊಟ್ಟಲ್ಲಿ ಕಥೆ ಮುಗಿಯಿತು(ನಮ್ಮದು!!). "ಸಾಕೇನು?" ಎಂದು ಎಂದೂ ಕೇಳುವವರಲ್ಲ ಈ ಮಂದಿ; "ಬೇಕಿಲ್ಲವೇಕೆ ಇನ್ನೂ?" ಎಂದೇ ಕೇಳುವರು ಎಲ್ಲರನ್ನ.

ಇಲ್ಲಿಯ ಜನಕೆ ಕಪಟ ವಂಚನೆಗಳು ಅಷ್ಟಾಗಿ ಹೆಚ್ಚು ಗೊತ್ತಿಲ್ಲ.
1 by 2 ಚಾ ಎನ್ನುವ ಮಾತೇ ಇಲ್ಲ, 3 in 1 ಚಾ ಎನ್ನುವ ಜನರೇ ಎಲ್ಲ.
ಮನಸು "ಸಾಣೆ ಹಿಡಿಯದ ವಜ್ರ, ಪುಟವಿಕ್ಕಿರದ ಚಿನ್ನ"ದಂತಿರುವ ಕಚ್ಚಾ ಅದಿರು ಸ್ವರೂಪ.
ಹೊರಗೆ ವಜ್ರಾದಪಿ ಎನಿಸಿದರೂ ಒಳಗೆ ಲೈನ್ ಬಜಾರ್ ಪೇಡೆಯಂತೆ; ಮಾತಿಗಿಳಿದರೆ ಹರಡುವುದು ಎಲ್ಲ ಕಡೆ ಪರಿಮಳದ ಸಲ್ಲಾಪ.

ಸಂಶಯ ಪದಾರ್ಥ:
೧.ಸಾಧನಕೇರಿಯ ಪದಗಾರುಡಿಗ- ವರಕವಿ ದ.ರಾ.ಬೇಂದ್ರೆ. ಕವಿಯೊಬ್ಬ ಜೀವ ಜಗತ್ತಿನಲಿ ಸಂಪೂರ್ಣ ಬೆಂದರೆ ಬೇಂದ್ರೆಯಾಗುವನೆಂದು ಜನ ಬಹಳ ಪ್ರೀತಿಯಿಂದ ಹೇಳುತ್ತಾರೆ. ಆದರೆ ಅಷ್ಟು ಬೇಯಲು ಬೇಂದ್ರೆಗೆ ಮಾತ್ರ ಸಾಧ್ಯವೆನಿಸುತ್ತದೆ. ಅದೇನೇ ಹೇಳಿ-ಜಗಕೆಲ್ಲ ಇರುವವರೊಬ್ಬರೇ ಬೇಂದ್ರೆ, ಬೆಂದ ಬೇಂದ್ರೆ.
೨.ನುಗ್ಗಿಕೇರಿ- ನಮ್ಮ ಕಾಲೇಜಿನ ಸಮೀಪವೇ ಇದ್ದ ಹನುಮಂತನ ದೇವಸ್ಥಾನ.
೩.ನಾದಗಂಗೆ- ಜಗತ್ತು ಕಂಡ ಹಿಂದೂಸ್ಥಾನಿ ಸಂಗೀತದ ಮಹಾನ್ ಗಾಯಕಿ, ಶ್ರೀ ಗಂಗೂಬಾಯಿ ಹಾನಗಲ್.
೪.ವಜ್ರಾದಪಿ-ಕುಸುಮಾದಪಿ-- "ವಜ್ರಾದಪಿ ಕಠೋರಾನಿ ಮೃದೂನಿ ಕುಸುಮಾದಪಿ"ಅಂತ ಒಂದು ಗಾದೆಯಿದೆ. ಅಂದರೆ ಹೊರಗೆ ಅವರ ವ್ಯಕ್ತಿತ್ವ ವಜ್ರದಷ್ಟು ಕಠೋರವಾಗಿ ಕಂಡರೂ ಒಳಗಿನ ಮನಸ್ಸು ಹೂವಿನಷ್ಟು ಮೃದು ಅಂತ.
"ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ" ಅಂತ ನಮ್ಮ ಕುವೆಂಪು ಕವಿಶೈಲದಲ್ಲಿ ನಿಂತು ಹಾಡಿದ ಹಾಗೆ "ಧಾರವಾಡವು ಬರೀ ಊರಲ್ಲವೋ, ಸಹೃದಯತೆಯ ನೆಲೆ ಕಾಣಿರೋ" ಅಂತ ಹಾಡುವಂತೆ ಎನಿಸಿದ್ದೇ ಈ ಕವನ ಬರೆಯಲು ಕಾರಣ. ಅಲ್ಲಿನ ೪ ವರ್ಷಗಳ ಜೀವನಾನುಭವ ನಿರ್ಮಲವೂ ಮಧುರವೂ ಆದದ್ದು. ಅರಸೀಕೆರೆ ಬಿಟ್ಟು ಬೇರೆ ಊರಿಗೆ ಓದೋಕ್ಕೆ ಹೋಗುವಾಗ ಆಗದಿದ್ದ ಬೇಜಾರು ಧಾರವಾಡ ಬಿಟ್ಟು ಬರುವಾಗ ಆಯ್ತು. ಏನೋ ಒಂದು ಮಧುರ ಸೆಳೆತ ಆ ಮಣ್ಣಿಗಿದೆ. ಜನರ ಮಾತು-ಮನಸು, ನಡೆ-ನುಡಿ ಎಲ್ಲವೂ ನಿಮಗೆ ಮೊದಲ ನೋಟಕ್ಕೆ ಹೊರಗಿಂದ ನೋಡುವಾಗ ಅಸೌಖ್ಯವೆನಿಸಿದರೂ ಹತ್ತಿರವಾದಂತೆಲ್ಲ ಮಲ್ಲಿಗೆಯ ಅತ್ತರಿನಂತೆ ಸುಖಾನುಭವ ಕೊಡುತ್ತದೆ. ಎಲ್ಲವೂ ಖುಲ್ಲಂ-ಖುಲ್ಲಾ. ಅವರ ನಿಸ್ಸಂಶಯವಾದ ಸ್ನೇಹಪೂರಿತ ಮನೋಭಾವ, ಭೋರ್ಗರೆಯುಯುವ ಪ್ರೀತಿ ತುಂಬಿದ ಮಾತುಗಳು ನನ್ನ ಮನದೊಳಗಣದ ಭಾವವನ್ನು ಉನ್ನತ ಮಟ್ಟಕ್ಕೇರಿಸಿದವು. ವಿಶಾಲ ಮನೋಭಾವದ ಆಲೋಚನೆಗಳು, ಎಲ್ಲರನ್ನೂ ಆದರಿಸುವ ಮನೋಧರ್ಮ, ಹಿತಾನುಭವ ಕೊಡುವ ಅನನ್ಯ ಅತಿಥಿ ಸತ್ಕಾರ, ಹೀಗೆ ಒಂದು ಒಟ್ಟಂದದ ಗುಣಧರ್ಮಗಳು ಆ ಮಣ್ಣಿನಲ್ಲಿ ಬೆರೆತು ಹೋಗಿದೆ. ಗಿಜಿಗುಡುವ ಹುಬ್ಬಳ್ಳಿ ಶಹರ ಪಕ್ಕದಲ್ಲಿದ್ದರೂ ತನಗೆ ಗೊತ್ತೇ ಇಲ್ಲವೆಂಬಂತೆ ಶಾಂತವಾಗಿದೆ. ಅಲ್ಲಿ ಸಂಕುಚಿತ ಮನಸ್ಸಿನವರು ಇಲ್ಲವೇ ಇಲ್ಲವೆಂದು ನಾನು ಹೇಳುತ್ತಿಲ್ಲ. ಆದರೆ ಅಲ್ಲಿ ಕೆಲವು ಜೀವನ ಮೌಲ್ಯಗಳು ಈಗಲೂ ಉತ್ತಮವಾಗಿದೆ. ಉಳಿದುಕೊಂಡಿದೆ.
ಬೇಂದ್ರೆ ಸಮಕಾಲೀನರಾದ ಶ್ರೀ ಶಂಕರ ಮೊಕಾಶಿ ಪುಣೇಕರ್ ರವರ "ಗಂಗವ್ವ ಗಂಗಾಮಾಯಿ" ಓದಿ. ಉತ್ತರ ಕರ್ನಾಟಕ ಭಾಷೆಯ ಮತ್ತು ಸಂಸ್ಕೃತಿಯ ಸಮರ್ಥ ಬಳಕೆಯಿಂದ ಕಾದಂಬರಿಯು ಅನನ್ಯವಾಗಿಯೂ ಅತ್ಯುತ್ತಮವಾಗಿಯೂ ಇದೆ.

ಯೌವ್ವನ

ಹಿಂದೊಮ್ಮೆ ಅ ತಿರುವಿನಂಚಿನ ತಿರುವಿನಲಿ, ನನ್ನೆಡೆಗೆ ಬಂದ ಕಿರುನಗೆಯ ನನಗೆಂದೇ ತಿಳಿದೆ;
ಅವಳು ಬಂದಂತೆಯೇ ಹೋಗಿಯೂ ಬಿಟ್ಟಳು. ತಿರುವಿನಲಿ ನಾನೊಬ್ಬನೇ ಉಳಿದೆ.
ಎಲ್ಲೋ ಯಾವಾಗಲೋ ಯಾರನ್ನೋ ನೆನೆಸಿ ನಕ್ಕ ನಗುವು ನಮಗೆಂದು ತಿಳಿಯಬೇಕೇಕೆ?
ಆದರೂ ಅನಂತ ವಿರಹದಿ ಸಖಿಯ ಬಯಸಿದ ಮನಸಿಗೆ ಸಿಕ್ಕ ಕನಸಿನ ರಾಣಿ ಆಕೆ!!

ಪ್ರೀತಿ ಪ್ರೇಮಗಳೆಂದರೆ ಅದೇನು ಹುಣಸೆ ಪಿಕ್ಕವೇ? ಸಿಕ್ಕ ಸಿಕ್ಕವರ ಮನದಲ್ಲಿ ಸಿಕ್ಕಲು,
ಅಂತರಂಗದಾ ತರಂಗ ಸಾಮ್ಯತೆ ಸಾಧಿಸಬೇಕು; ಅನನ್ಯ ಸುಮನೋಹರ ಸ್ವರ ಹೊಮ್ಮಲು.
ಯೌವ್ವನದ ಹುಚ್ಚುಹೊಳೆ, ದಡಗಳಲಿ ಮೋಹ ತುಂಬಿದ ಕಳೆ; ಸಂಜೀವಿನಿಯೇ ಅದೆಂದು ತಿಳಿದು ಔಷಧಿಯಾಗಿ ಬಳಸಿ
ಪ್ರಬುದ್ಧವಲ್ಲದ ಮನದ ರೋಗ ಉಲ್ಬಣಿಸಿದೆ. ಮಾಯಾಲೋಕದಲಿ ಬುದ್ಧಿಯನು ಸ್ಥಿಮಿತವಿಲ್ಲದೆ ಕುಣಿಸಿ.

ಎಲ್ಲೋ ಕಂಡ ರಂಗೇರಿದ ಚಿತ್ರಗಳ ಪ್ರಭಾವ,
ಮನದಲ್ಲಿ ಭಾವನೆಗಳ ಅಭಾವ;
ಯಾರನ್ನೋ ನೋಡಿ ಅನುಕರಿಸಿದ ಸ್ವಂತವಲ್ಲದ ಹಾವಭಾವ.
ತಲೆಬುಡವಿಲ್ಲದ ವರ್ಣನೆಗೆಟುಕದ ಸ್ವಭಾವ.
ಎಲ್ಲರನ್ನೂ ಮೀರಿ ಮೇಲೇರುವೆನೆಂಬ ಅತಿ ವಿಶ್ವಾಸ; ಧಾಷ್ಟ್ಯ ತುಂಬಿದ ಅಟ್ಟಹಾಸ.
ಲೋಕ, ಲೌಕಿಕ, ಭೋಗ.. ಹುಚ್ಚು ವ್ಯಸನದ ವ್ಯಾಮೋಹವೆಂದೆಣಿಸಿ ಸ್ವೀಕರಿಸಲೂಬಹುದು ಸಂನ್ಯಾಸ.

ಎಲ್ಲ ಧರ್ಮಶಾಸ್ತ್ರಗಳ ತಲೆ ತಿವಿದು, ಹೊಟ್ಟೆ ಬಗೆದು ಸತ್ಯವೊಂದನೇ ಬಯಸುವ ಅತೃಪ್ತ ಜೀವ;
ಸಮಾಜದ ಎಲ್ಲ ಸೊಟ್ಟ ಪಟ್ಟೆಗಳನ್ನು ಸುಟ್ಟು ಸರಿಪಡಿಸಬೇಕೆಂಬ ದೃಢ ಸಂಕಲ್ಪ ಭಾವ.
ಹೊತ್ತಿ ಉರಿಯುತ್ತಿರಲು ಆದರ್ಶಗಳ ಕೆಂಡ, ಕುದಿಯುತಲಿದೆ ನಾಳನಾಳದಲಿ ಬಿಸಿರಕ್ತ;
ನವ ವಿಶ್ವ ಸೃಷ್ಟಿಗೆ ಸಿದ್ಧವಾಗುತಿದೆ ಮಾನಸ ಯಜ್ಞಕುಂಡ, ಯುವಜನತೆಯೆನ್ನುವುದು ಸರ್ವಶಕ್ತ.

ಯೌವ್ವನವೆಂಬುದು--ಅನಂತ ಸಾಮರ್ಥ್ಯದ ಕುದುರೆ; ಪಾರ್ಥಸಾರಥಿ ಬೇಕು- ಹಿಡಿತದೊಳಗಿಡಲು.
ಭೋರ್ಗರೆದು ಹರಿವ ಹೊಳೆ; ವಜ್ರದಡಗಳು ಬೇಕು- ರಭಸವ ತಡೆ ಹಿಡಿಯಲು.
ಪ್ರಳಯಕಾಲದ ಕುಂಭದ್ರೋಣ ಮಳೆ; ಗೋವರ್ಧನ ಗಿರಿ ಬೇಕು- ಅದನೆದುರಿಸಿ ನಿಲ್ಲಲು.
ಬದುಕಿನೊಳು ಬೆರೆತ ಸುಂದರ ಲೀಲೆ; ದಿವ್ಯ ದೃಷ್ಟಿಯು ಬೇಕು- ಲಾಲಿತ್ಯದ ಸವಿ ಕಳೆಗಟ್ಟಲು.

ಯೌವ್ವನವೆಂಬ ಕಾಲಘಟ್ಟವೇ ಬದುಕಿನಲ್ಲಿ ಅತಿ ವಿಚಿತ್ರ. ಸಾಧಿಸಲು ಅಸಾಧ್ಯವಾದ ಸರ್ವವನ್ನೂ ಸಾಧಿಸುವೆನೆನ್ನುವ ಬುದ್ಧಿ, ಯಾವುದೋ ಹುಚ್ಚು ಕಾಮನೆಗಳಿಂದ ಪರಿಮಿತಿಗೊಳಗಾಗಿ ಅವ್ಯಕ್ತ ಮೋಹಪಾಶದೊಳಗೆ ಸಿಕ್ಕಿ ಸಾಯುವ ಮನಸು, ಬೇಕಿಲ್ಲದ ನೂರು ಭಾವನೆಗಳನ್ನು ಬೇಡವೆನಿಸಿದರೂ ಸೃಷ್ಟಿಸಿಕೊಂಡು ಅದರ ಬಲೆಯೊಳಗೆ ತಾನೆ ಸಿಕ್ಕಿ ಒದ್ದಾಡುವ ಅತಿ ವಿಚಿತ್ರವಾದ ಜೀವನದ ತುಣುಕು ಯೌವ್ವನ. ಕಾಲೇಜಿನಲ್ಲಿ ಓದಿದ "ಧಮನಿಯಲಿ ಬಿಸಿ ನೆತ್ತರುಕ್ಕುತಿಹ ಹೇ ಯುವಕ!!, ಹೊಸದೊಂದು ಬ್ರಹ್ಮಾಂಡ ಕಟ್ಟೋಣ ಬಾ" ಎಂಬ ಚಂದ್ರಶೇಖರ ಕಂಬಾರರ ಕವಿತೆ ಇನ್ನೂ ನನ್ನ ಮನದಲ್ಲಿ ಗುಂಯ್‌ಗುಡುತ್ತಿದೆ. ಸಾವಿರ ಕನಸುಗಳು, ಸಹಸ್ರ ಅಡ್ಡದಾರಿಗಳು, ಅನಂತ ಆಶಾವಾದಗಳು ಎಲ್ಲವನ್ನೂ ಹೊತ್ತು ಎಲ್ಲಿಗೆ ಮುಟ್ಟುತ್ತೇವೆಂದು ತಿಳಿಯದೇ ಎಲ್ಲೋ ಒಂದು ಕಡೆ ಮುಟ್ಟಬೇಕೆಂಬ ಗುರಿಹೊಂದಿ ಮುನ್ನುಗ್ಗಲು ಮುಂದಾಗುವ "ಅನಂತ ಸಾಮರ್ಥ್ಯ"ವೇ ಈ ಯೌವ್ವನದ ಮಹಾನ್ ಶಕ್ತಿ. ಸಾಯುವ ಸತ್ಯ ಗೊತ್ತಿದ್ದರೂ ಬದುಕಿಯೇ ತೀರುತ್ತೇನೆಂಬ ಛಲಹೊತ್ತು ಪ್ರವಾಹಕ್ಕೆದುರಾಗುವ ಪ್ರತಾಪ, ಬಿದ್ದರೆ ತಲೆಚಿಪ್ಪಿನ ಚೂರು ಕೂಡ ಸಿಗಲಿಕ್ಕಿಲ್ಲವೆನಿಸಿದರೂ ಪರ್ವತದಂಚಿನಿಂದ ಪಾತಾಳದ ತಳಕ್ಕೆ ನೆಗೆಯಬೇಕೆನ್ನುವ ಪ್ರಲಾಪ, ಸಮಯ ಸಿಕ್ಕದಿದ್ದರೂ ಸಿಕ್ಕ ಸಮಯವನ್ನೆಲ್ಲಾ ಹರಣ ಮಾಡುವ ಇದರ ಸ್ವರೂಪ ಇಂದಿಗೂ ಪೂರ್ಣ ಪ್ರಮಾಣದಲ್ಲಿ ಬಿಡಿಸಲಾಗಿಲ್ಲ, ಉಣಬಡಿಸಲಾಗಿಲ್ಲ. ಅಂಥಾ ಅನೂಹ್ಯ ಭಾವಗಳು ಈ ಪಾಮರನ ದೃಷ್ಟಿ ದರ್ಶನಕ್ಕೆ ಬಿದ್ದಾಗ ಮೂಡಿದ ಭಾವಲಹರಿಯೇ ಈ ಪುಟ್ಟ ಕವನ. ಯೌವ್ವನದ ಭಾವಗಳು ಬಿಸಿರಕ್ತವಿರುವಾಗಲೇ ಬರೆಯುವುದು ಒಳ್ಳೆಯದೆನಿಸಿತು.......:) ಅದಕ್ಕಾಗಿ ಸಾಂದರ್ಭಿಕವಾಗಿ ಇದು ಮೂಡಿತು. ಓದಿ ಸವಿದು ಅಭಿಪ್ರಾಯ ತಿಳಿಸಿ. ಈ ಕಾಲಘಟ್ಟದ ಕುರಿತಾದ ಇನ್ನೊಂದು ಕವಿತೆಯನ್ನು "ಹರೆಯ" ಅನ್ನೋ ಶೀರ್ಷಿಕೆಯಲ್ಲಿ ಬರೆದಿದ್ದೇನೆ. ನೋಡಿ ಆನಂದಿಸಿ.

ಶನಿವಾರ, ಮಾರ್ಚ್ 21, 2009

ಹರೆಯ

ಪ್ರಬುದ್ಧ ಪ್ರಭೆಯ ಮತ್ತೊಂದು ಮಗ್ಗುಲಲಿ ಕಣ್ತುಂಬ ಕುಕ್ಕಿದೆ ಗಾಢಾಂಧಕಾರ.
ಹುಟ್ಟಿನೊಡನೆಯೇ ಸಾವೂ ಹುಟ್ಟಿ ,ಹುಟ್ಟನ್ನು ಕಳೆಯುತ್ತದೆನ್ನುವ ಸತ್ಯಕ್ಕೀಗ ಸುಳ್ಳೇ ಜ್ವರ.
ಮಾಯೆ ಅನಂತ ವಿರಹದ ಬಲೆ ಬೀಸಿದೆ; ಬಯಸಿದೆ ಸಂಗಾತಿಯ ಸಂಗಡ ಸಂಭ್ರಮದ ಸಂಚಾರ.
ಸಂಗಾತಿಯ ಸಂಗತಿಗಳಿಲ್ಲದೇ ಸಂಘಾತಕ್ಕೊಳಗಾಗಿದೆ ಕರಣ, ತೂರಾಡಿದೆ ತೂಗುದೀಪ; ಮನವೀಗ ಮರ್ಕಟ ಲಾಂದ್ರ.

ದಿಕ್ಕುಗಾಣದೆ ನೂರು ದಿಕ್ಕಿನೆಡೆ ನೋಟ.
ತಪ್ಪಿಸಿಕೊಳ್ಳಲು ಕವಲುದಾರಿಗಳೊಳಗೆ ಗಾಣದೆತ್ತಿನ ಓಟ.
ಮಾರ್ಗಮಧ್ಯದೊಳಗೆ ಸುಸ್ತಾಗಿ ಒಳದಾರಿಗೆ ಹುಡುಕಾಟ.
ಅಡ್ಡದಾರಿಯ ಕೈಸನ್ನೆ, ಸಮ್ಮೋಹಿನಿಯ ಸೆಳೆತ; ಹೊರಳು ಹಾದಿಯಲಿ ದೊರೆತ ಸಮಯ ಸಾಧಕರ ಕೂಟ.

ಮುಳುಗೇಳುತ ನದಿನಡುವೆ ದೋಣಿದ್ವಯಗಳ ಆಶ್ರಯಿಸುತ,
ಹಪಹಪಿಸಿ ಪರಿತಪಿಸಿ ಸುಳಿಯ ಕಡೆಗೋಡುತ.
ಭೂತದನುಭವವಿಲ್ಲ, ಭವಿಷ್ಯಕೆ ಭಾಷ್ಯ ಬರೆದಿಲ್ಲ.
ಭವದಿ ಬೆಂದಿದೆ ಜೀವ: ಇಂದೆನ್ನುವುದು ಈಗ ಸಿಗುತ್ತಲೇ ಇಲ್ಲ.

ಪ್ರಾಯವೆನ್ನುವುದು ಪ್ರಾಯಃ ಪ್ರತಿಜೀವಿಯ ಅನಿವಾರ್ಯ ಅವ್ಯವಸ್ಥಿತ ಪಯಣ.
ಪ್ರತಿನದಿಯ ದೆಸೆಗಿರುವ ನೆರೆಯ ಅನುಭವದಂತೆ. ಜೀವನದ ಜೀವೋನ್ಮಾದ ನರ್ತನ.
ಎದುರಿಸಬಲ್ಲದೇ ಮನಸು ಸ್ಥಿತಿಯ ಪ್ರಳಯಗಳ, ಅನುಭವದ ಅಣೆಕಟ್ಟಿನಚ್ಚುಕಟ್ಟಿರದೆ?
ತಿಳಿನೀರಿಗೆ ಬೆಲೆಯಿಲ್ಲ, ಒಂದು ಬಾರಿಯಾದರೂ ಅದು ಕಲ್ಮಣ್ಣು ರಾಡಿಗಳ ಕಾಣದೆ.

ಉಕ್ಕಿನಂತಿಹ ಸೊಕ್ಕು, ಬುದ್ಧಿಗೆ ಹಿಡಿದಿಹ ತುಕ್ಕು, ರೊಕ್ಕದಿಕ್ಕಳ ಮೀರಿ ಬೆಳೆಯಬೇಕು ಹೃದಯ;
ನವ ಭಾವ ಸಂಸ್ಕಾರ, ನವ ಪ್ರಾಣ ಸಂಚಾರ, ಮನ್ಮಥನ ಶರ ಸೋಕಿ ಶಿವಶಕ್ತಿ ಸಂಚಯ.
ದೌರ್ಬಲ್ಯಗಳನೆಣಿಸಿ, ಅದನೆ ಮೆಟ್ಟಿಲಂದದಿ ಬಳಸಿ, ಮನಮಥಿಸಿ, ಮಾಯೆಯ ಮಣಿಸಿ.-
ಮುಂದೆ ಕಾದಿಹುದು ತಾರುಣ್ಯಕೆ ವಿಜಯ.
ಮಹತ್ ಸೋಲನು ಕೂಡ ಮಹಾನ್ ಗೆಲುವೆಂದೆಣಿಸಿ ಮುಂದೆ ನಡೆಯುವುದೇ ಹರೆಯ.

ಪ್ರಿಯ ಮಿತ್ರ ಮಂಡಲಕ್ಕೆ ನನ್ನ ನಮಸ್ಕಾರಗಳು. ಹಿಂದೆ "ಯೌವ್ವನ" ಎಂಬ ಒಂದು ಕವಿತೆಯನ್ನು ತರುಣ ಭಾವದಲ್ಲಿ ಭಾವಾವಿಷ್ಟನಾಗಿ ಬರೆದಿದ್ದೆ. ಆದರೂ ಆ ಜೀವನದ ಜೀವೋತ್ಸಾಹದ ಪ್ರಮುಖ ಭಾವವಾದ ಗೊಂದಲಮಯ ಜಗತ್ತನ್ನು ಆ ಕವನದಲ್ಲಿ ಸಾಕಷ್ಟು ವ್ಯಕ್ತಪಡಿಸಲಲು ಸಾಧ್ಯವಾಗದೇ ಹೋಯ್ತು. ಅದರಲ್ಲಿ ಒಂದು ರಭಸವಿತ್ತು, ವೇಗವಿತ್ತು. ಆದರೆ ರಭಸವೇ ಇಲ್ಲದ ಜಡತೆಯೇ ಜೀವನವಾದ ಸಂದರ್ಭಗಳೂ ಸಾಕಷ್ಟು ಇಲ್ಲದಿಲ್ಲ. ಅಸಹಾಯಕನ ಅಳಲು ಆರ್ತತೆ, ದಿಕ್ಕೇ ತೋಚದಂತಾಗಿ ಬುದ್ಧಿ ಭ್ರಮೆ ಹಿಡಿಯುವ ಪರಿಸ್ಥಿತಿ, ಎಲ್ಲವೂ ಹರೆಯದ ಅವಿಭಾಜ್ಯ ಅಂಗವೇ ಆಗಿದೆ. ಹಾಗಂತ ಕವನದಲ್ಲಿ ಬರೀ ಗೋಜಲುಗಳನ್ನೇ ಕೊಟ್ಟಿರುವೆನೆಂದು ತಿಳಿಯಬೇಕಾಗಿಲ್ಲ. ಅಡ್ಡಡ್ಡಾಗಿ ಹೆಣೆದ ಬಲೆಯನ್ನೂ ಜೊತೆಗೆ ಅದನ್ನು ಬಿಚ್ಚುವ ಹಲವು ದಾರಗಳನ್ನೂ ಮನೋ ಅನುಭವದಂತೆ ಚಿತ್ರಿಸಿದ್ದೇನೆ. ದಾರಗಳು ಸೂತ್ರ ಹರಿಯುವಂತಿವೆಯೇ ಅಥವಾ ಸೂತ್ರಗಳೇ ಅರ್ಥವಾಗದಂತಾಗಿವೆಯೇ ನೀವೇ ಪ್ರತಿಕ್ರಯಿಸಬೇಕು. ಪದ್ಯದಲ್ಲಿ ಬಂದಿರುವ 'ಪಂಚಮ' ಎಂಬ ಪದವನ್ನು ಪಂಚೇಂದ್ರಿಯಗಳು ಅಂತ ಗ್ರಹಿಸಬೇಕು. ಅಥವಾ ಸ್ವರದ ಪಂಚಮ 'ಪ' ಅಂತ ಗ್ರಹಿಸಿದರೂ ಪರವಾಗಿಲ್ಲ. ಆರೋಹಣದಲ್ಲಿ ಪಂಚಮಿ ಸ್ವರ ವಿಕೃತಿಯಾಗಿದೆ ಅಂತ ಗ್ರಹಿಸಬಹುದು.

ಬೆಂಬಲಿಗರು

ನನ್ನ ಬಗ್ಗೆ

electrical engineer working in Mangalore chemicals and fertilisers. Mangalore